ಶಿಕ್ಷಣ ಸಚಿವರಿಗೆ ಶಾಸಕ ರೇವಣ್ಣ ತರಾಟೆ

| Published : May 18 2025, 01:51 AM IST

ಸಾರಾಂಶ

ಬಡವರ ಮಕ್ಕಳನ್ನು ಗೋಳು ಹೊಯ್ದುಕೊಂಡರೆ ನಿಮ್ಮ ಕುಟುಂಬ ನಾಶ ಆಗುತ್ತದೆ. ಮಕ್ಕಳು ನೀಡುವ ಶುಲ್ಕದ್ದಲ್ಲಿಯೂ ಹಣ ಹೊಡೆತ್ತಿದ್ದೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯೇ ಎಂದು ಶಾಸಕ ಎಚ್.ಡಿ.ರೇವಣ್ಣ ರಾಜ್ಯ ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದರು. ವಿದ್ಯಾರ್ಥಿಗಳ ಪೋಷಕರು ಕೂಲಿ ಮಾಡಿ ಅಷ್ಟಿಷ್ಟು ಕೂಡಿ ಹಾಕಿ ಶಿಕ್ಷಣ ಸಂಸ್ಥೆಗೆ ನೀಡಿದ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ? ಇಂತಹ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಸಚಿವರ ವಂಶ ಹೇಗೆ ಉದ್ಧಾರ ಆಗಲು ಸಾಧ್ಯ ಎಂದು ಕಟುವಾಗಿ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಬಡವರ ಮಕ್ಕಳನ್ನು ಗೋಳು ಹೊಯ್ದುಕೊಂಡರೆ ನಿಮ್ಮ ಕುಟುಂಬ ನಾಶ ಆಗುತ್ತದೆ. ಮಕ್ಕಳು ನೀಡುವ ಶುಲ್ಕದ್ದಲ್ಲಿಯೂ ಹಣ ಹೊಡೆತ್ತಿದ್ದೀರಲ್ಲ ನಿಮಗೆ ಮಾನ ಮರ್ಯಾದೆ ಇದೆಯೇ ಎಂದು ಶಾಸಕ ಎಚ್.ಡಿ.ರೇವಣ್ಣ ರಾಜ್ಯ ಶಿಕ್ಷಣ ಸಚಿವರ ವಿರುದ್ಧ ಹರಿಹಾಯ್ದರು.

ಪಟ್ಟಣದ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ೨೦೨೪-೨೫ ಸಾಲಿನ ಸಾಂಸ್ಕೃತಿಕ ವೇದಿಕೆ, ಕ್ರೀಡೆ, ಎನ್‌ಎಸ್‌ಎಸ್, ರೇಂಜರ್ಸ್‌ ಮತ್ತು ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ತರಲಾಗಿದೆ, ಆದರೆ ಶಿಕ್ಷಣ ಸಚಿವರು ರಾಜ್ಯದಲ್ಲಿನ ಸುಮಾರು ೪೨೦ ಕಾಲೇಜುಗಳಲ್ಲಿ ಮಕ್ಕಳಿಂದ ಶೇಖರಣೆ ಮಾಡಿರುವ ಶುಲ್ಕದಲ್ಲಿ ದುಡ್ಡು ಹೊಡೆಯತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಿಡಿಶಾಪ ಹಾಕಿದರು.ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಶ್ರೀಮಂತರ ಮಕ್ಕಳಲ್ಲ, ನಮ್ಮ ವಿದ್ಯಾರ್ಥಿಗಳ ಪೋಷಕರು ಕೂಲಿ ಮಾಡಿ ಅಷ್ಟಿಷ್ಟು ಕೂಡಿ ಹಾಕಿ ಶಿಕ್ಷಣ ಸಂಸ್ಥೆಗೆ ನೀಡಿದ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದೀರಿ ಇದು ಎಷ್ಟರ ಮಟ್ಟಿಗೆ ಸರಿ? ಇಂತಹ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಸಚಿವರ ವಂಶ ಹೇಗೆ ಉದ್ಧಾರ ಆಗಲು ಸಾಧ್ಯ ಎಂದು ಕಟುವಾಗಿ ಟೀಕಿಸಿದರು.

ನಮ್ಮ ಹೊಳೆನರಸೀಪುರದಲ್ಲಿ ಉತ್ತಮ ಶೈಕ್ಷಣಿಕ ವಿಷಯಗಳನ್ನು ಹೊಂದಿದೆ, ಸರ್ಕಾರ ನೀಡಿರುವ ಎಲ್ಲ ಸವಲತ್ತು ಹೊಂದಿರುವ ಕಾಲೇಜುಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಅವರಿಗೆ ಉತ್ತಮ ಭವಿಷ್ಯ ನೀಡಿ ಎಂದು ತಿಳಿಸಿದ ಅವರು, ಪ್ರಸ್ತುತ ನಮ್ಮ ಪಡುವಲಹಿಪ್ಪೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಡವರ್ಗದ ಮಕ್ಕಳು ಉತ್ತಮವಾಗಿ ತೇರ್ಗಡೆ ಹೊಂದಿ, ಇಂದು ಉನ್ನತ ಸ್ಥಾನದಲ್ಲಿ ಉದ್ಯೋಗ ಗಳಿಸಿ ತಿಂಗಳಿಗೆ ಕನಿಷ್ಠ ೧ ಲಕ್ಷಕ್ಕೂ ಹೆಚ್ಚು ಸಂಬಳ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಬಗ್ಗೆ ತಮಗೆ ಭಾರಿ ಸಂತೋಷ ಮತ್ತು ಶ್ಲಾಘನೆ ಮಾಡಬೇಕಾಗಿದೆ ಎಂದು ತಿಳಿಸಿ, ವಿದ್ಯಾರ್ಥಿಗಳಾದ ತಾವುಗಳು ಸಹ ಈ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜಿಗೆ ಮತ್ತು ನಿಮ್ಮ ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕೆಂದರು.

ಈ ಕಾಲೇಜಿನ ಚುಕ್ಕಾಣಿ ಹಿಡಿದಿರುವ ಪ್ರಾಂಶುಪಾಲೆ ಆಶಾಜ್ಯೋತಿ ಅವರು ದೂರದ ಬೆಂಗಳೂರಿನಿಂದ ಇಲ್ಲಿಗೆ ಬಂದು ಕಾಲೇಜಿನ ಹೊಣೆಗಾರಿಕೆ ಪಡೆದು ಕಾಲೇಜಿನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಕೈಜೋಡಿಸಿರುವ ಫಕೀರಮ್ಮ ಅವರು ಸಹ ಕಾಲೇಜಿನ ಏಳಿಗೆಗೆ ಉತ್ತಮ ಕಸರತ್ತು ಮಾಡಿದ ಫಲವಾಗಿ ಇಂದು ಉತ್ತಮ ಬೋಧನೆ ಮತ್ತು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಲು ಸಹಕಾರಿ ಆಗಿದೆ ಎಂದು ಶುಭ ಹಾರೈಸಿ ಈ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಕಾಣಲು ಉಪನ್ಯಾಸಕರ ಶ್ರಮವನ್ನು ಮೆಚ್ಚಲೇಬೇಕಿದೆ ಎಂದರು ಶ್ಲಾಘಿಸಿದರು.

ಇತ್ತೀಚೆಗೆ ನಮ್ಮ ಮಕ್ಕಳು ವ್ಯಾಸಂಗಕ್ಕಾಗಿ ಜಿಲ್ಲಾ ಕೇಂದ್ರದ ಕಾಲೇಜಿಗೆ ಹೋಗುತ್ತಾರೆ, ಆದರೆ ಅಲ್ಲಿಗೆ ಹೋದ ಮಕ್ಕಳು ವ್ಯಾಸಂಗ ಮಾಡುತ್ತಾರೆ ಎಂಬ ಗ್ಯಾರಂಟಿ ಇಲ್ಲ, ಅಲ್ಲಿ ಹೋದರೆ ಹೋಟೆಲ್‌ಗಳಲ್ಲಿ ಚೆನ್ನಾಗಿ ತಿಂದು ಬರಬಹುದು, ಆದರೆ ಇದರಿಂದ ಪೋಷಕರಿಗೆ ತಮ್ಮ ಮಕ್ಕಳ ವ್ಯಾಸಂಗದ ಬಗ್ಗೆ ಪೂರ್ಣ ಮಾಹಿತಿ ದೊರೆಯೋದು ಕಷ್ಟ ಎಂದು ವಿದ್ಯಾರ್ಥಿಗಳು ಎಚ್ಚರದಿಂದ ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಆಶಾಜ್ಯೋತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಯಚಂದ್ರ, ಡಾ. ಅಶೋಕ್, ಡಾ.ಗಣೇಶ್, ಶ್ವೇತಾ ನಾಯಕ್, ಮಧುಶ್ರೀ, ನವೀನ್, ಸುನೀಲ್, ಜಗದೀಶ್ ಡಾ. ಕೃಷ್ಣಮೂರ್ತಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಜರಿದ್ದರು.