ಸಾರಾಂಶ
ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರವನ್ನು ಬುಧವಾರ ಶಾಸಕಿ ರೂಪಕಲಾ ಶಶಿಧರ್ ಅವರು ತಾಲೂಕಿನ ಜನತೆಗೆ ಲೋಕಾರ್ಪಣೆ ಮಾಡಿದರು.
ಕೆಜಿಎಫ್: ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯ ಡಿಜಿಟಲೀಕರಣ ಕೇಂದ್ರವನ್ನು ಬುಧವಾರ ಶಾಸಕಿ ರೂಪಕಲಾ ಶಶಿಧರ್ ಅವರು ತಾಲೂಕಿನ ಜನತೆಗೆ ಲೋಕಾರ್ಪಣೆ ಮಾಡಿದರು.
ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಭೂ ಸುರಕ್ಷಾ ಯೋಜನೆಯು ಸರ್ಕಾರದ ಮಹತ್ವವಾದ ಯೋಜನೆಯಾಗಿದೆ, ಈ ಯೋಜನೆಯಿಂದ ತಾಲೂಕಿನ ಕ್ಯಾಸಂಬಳ್ಳಿ, ಬೇತಮಂಗಳ ಹೋಬಳಿಗಳ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸರಿಪಡಿಸಬಹುದಾಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆ ಭೂ ದಾಖಲೆಗಳನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು, ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭೂ ದಾಖಲೆಗಳನ್ನೂ ಸಹ ಡಿಜಿಟಲೀಕರಣ ಮಾಡಿ ರಕ್ಷಿಸಲಾಗುವುದೆಂದು ತಿಳಿಸಿದರು.ಭೂ ದಾಖಲೆಗೆ ಜನರು ಅಲೆಯುವಂತಿಲ್ಲ: ಇನ್ನುಮುಂದೆ ಭೂ ದಾಖಲೆ ಪಡೆಯಲು ಜನರು ಕಚೇರಿಗೆ ಅಲೆಯುವಂತಿಲ್ಲ, ನೇರವಾಗಿ ಜನರಿಗೆ ಸಿಗುತ್ತದೆ, ಜನರನ್ನು ವಿನಃಕಾರಣ ಕಚೇರಿಗೆ ಅಲೆದಾಡಿಸುವುದನ್ನು ಅಧಿಕಾರಿಗಳು, ಸಿಬ್ಬಂದಿ ತಪ್ಪಿಸಬೇಕು, ಅಗತ್ಯ ಭೂ ದಾಖಲೆಗಳನ್ನು ಜನರಿಗೆ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಳೆಯ ದಾಖಲೆ ಸಂರಕ್ಷಣೆಗೆ ಆದ್ಯತೆ: ಹಳೆಯ ಶಿಥಿಲಗೊಂಡ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ, ಸ್ವಾತಂತ್ರ್ಯ ಪೂರ್ವದ ಅವಧಿಯ ಭೂ ದಾಖಲೆಗಳನ್ನು ಅಪ್‌ಲೋಡಿಂಗ್ ಮಾಡಿ ಗಣಕೀರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ನಾಗವೇಣಿ, ಶಿರಸ್ತೇದಾರ್ ಮಂಜುನಾಥ್, ಅಧಿಕಾರಿಗಳಾದ ಕಿರಣ್, ಸತ್ಯಮೂರ್ತಿ, ಚಂದ್ರಮೋಹನ್ ಉಪಸ್ಥಿತರಿದ್ದರು.