ಸಮುದಾಯ ಭವನ ನಿರ್ಮಾಣ, ಸಣ್ಣ-ಪುಟ್ಟ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಕೊಡುವ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ದ ₹2 ಕೋಟಿ 6 ತಿಂಗಳಾಗುತ್ತಾ ಬಂದರೂ ಪೂರ್ಣ ಮಂಜೂರಾಗಿಲ್ಲ
ರೋಣ: ಪ್ರತಿ ವರ್ಷ ಶಾಸಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗುವ ₹ 2 ಕೋಟಿ ಅನುದಾನದಲ್ಲಿ 6 ತಿಂಗಳಲ್ಲಿ ₹ 50 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಮಾಡುವುದು ಹೇಗೆ ಎಂದು ಶಾಸಕ ಸಿ.ಸಿ. ಪಾಟೀಲ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಜಿಪಂ ಇಲಾಖೆ ವತಿಯಿಂದ ₹ 60 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮುದಾಯ ಭವನ ನಿರ್ಮಾಣ, ಸಣ್ಣ-ಪುಟ್ಟ ರಸ್ತೆ ದುರಸ್ತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಕೊಡುವ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ದ ₹2 ಕೋಟಿ 6 ತಿಂಗಳಾಗುತ್ತಾ ಬಂದರೂ ಪೂರ್ಣ ಮಂಜೂರಾಗಿಲ್ಲ. ಹೀಗಾದರೇ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು ಎಂದಿರುವ ಅವರು, ಇದರಿಂದ ಜನರ ಬೇಡಿಕೆಗಳಿಗ ತಕ್ಷಣವೇ ಸ್ಪಂದಿಸಲು ಸಮಸ್ಯೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೌಜಗೇರಿ ಗ್ರಾಮದಲ್ಲಿ ಜಿಪಂನಿಂದ ₹ 60 ಲಕ್ಷ ವೆಚ್ಚದಲ್ಲಿ 1007 ಮೀಟರ್ ಉದ್ದ, 3.5 ಮೀಟರ್ ಅಗಲ, 6 ಇಂಚು ಕಾಂಕ್ರೀಟ್ , ರಸ್ತೆ ಒಂದು ಬದಿ ಚರಂಡಿ ನಿರ್ಮಾಣ, ಎರಡು ಕಡೆ ಸಿಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, ಜನತೆ ಮುಂದೆ ನಿಂತು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ತೆಗೆದುಕೊಳ್ಳಬೇಕು ಎಂದರು.ಯಾ.ಸ. ಹಡಗಲಿ-ಕೌಜಗೇರಿ ಮಧ್ಯೆ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹1.5 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುವುದು. ಕೌಜಗೇರಿ ಗ್ರಾಮದೇವತೆ ಸಮುದಾಯ ಭವನ ನಿರ್ಮಣಕ್ಕೆ ಶೀಘ್ರ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೌಜಗೇರಿ ಗ್ರಾಪಂ ಅಧ್ಯಕ್ಷ ಸುರೇಶಗೌಡ ಪಾಟೀಲ, ಹೊಳೆಆಲೂರ ಬಿಜೆಪಿ ಮಂಡಳ ಅಧ್ಯಕ್ಷ ಸೋಮಶೇಖರ ಚರೇದ, ಸೋಮನಗೌಡ ಹುಡೇದಮನಿ, ಈರಪ್ಪ ತಾಳಿ, ಸುರೇಶ ಗಾಣಿಗೇರ, ಶರಣು ಬರಶೆಟ್ಟಿ, ವೀರಣಗೌಡ ಆಡೂರ, ಗಂಗಪ್ಪ ಸಾವಣ್ಣವರ, ಮಹಾಂತೇಶ ದೇವಗಣ್ಣವರ, ಮುತ್ತಪ್ಪ ಉಳ್ಳಾಗಡ್ಡಿ, ನಿಂಗಪ್ಪ ಡಂಗರಿ, ಶೇಖಪ್ಪ ಚಲವಾದಿ, ಪರಸಪ್ಪ ಪೂಜಾರ, ವ್ಹಿ.ಎಸ್. ವಾಲಿ, ಎನ್.ಎಚ್. ಕವಣಿ, ಬಸವರಾಜ ಗಾಣಿಗೇರ, ಶಿವಾನಂದ ಉಳ್ಳಾಗಡ್ಡಿ, ಸರೇಶ ಬಿರನೂರ, ಜಿಪಂ ಅಭಿಯಂತರ ವಿಜಯ ಗೌಡರ, ಗ್ರಾಪಂ ಪಿಡಿಒ ಭೀಮಪ್ಪ ಓಲೆಕಾರ ಮುಂತಾದವರು ಉಪಸ್ಥಿತರಿದ್ದರು.