ಶಾಸಕನ ಮಗನಿಂದ ಅಧಿಕಾರಿ ಅವಹೇಳನ: ಭಂಡಾರಿ ಖಂಡನೆ

| Published : Feb 12 2025, 12:30 AM IST

ಶಾಸಕನ ಮಗನಿಂದ ಅಧಿಕಾರಿ ಅವಹೇಳನ: ಭಂಡಾರಿ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕನೇ ಆಗಿರಲಿ ಅಥವಾ ಶಾಸಕನ ಪುತ್ರನೇ ಆಗಿರಲಿ, ಕಾನೂನಿನಲ್ಲಿ ಎಲ್ಲರೂ ಒಂದೆ, ಅಧಿಕಾರಿಗಳ ಅವಹೇಳನ ಮಾಡಿದ್ದರೆ ಅದು ಖಂಡನಾರ್ಹ ಎಂದು ವಿಧಾನ ಪರಿಷತ್‌ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಾಸಕನೇ ಆಗಿರಲಿ ಅಥವಾ ಶಾಸಕನ ಪುತ್ರನೇ ಆಗಿರಲಿ, ಕಾನೂನಿನಲ್ಲಿ ಎಲ್ಲರೂ ಒಂದೆ, ಅಧಿಕಾರಿಗಳ ಅವಹೇಳನ ಮಾಡಿದ್ದರೆ ಅದು ಖಂಡನಾರ್ಹ ಎಂದು ವಿಧಾನ ಪರಿಷತ್‌ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಅಧಿಕಾರಿಗಳನ್ನು ಅವಹೇಳನ ಮಾಡಿದ್ದರೆ ಅದನ್ನು ತಾನು ವೈಯಕ್ತಿಕ ಮತ್ತು ಪಕ್ಷದ ನೆಲೆಯಲ್ಲಿ ಖಂಡಿಸುತ್ತೇನೆ ಎಂದರು.

ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವ ಹಕ್ಕುಗಳು ಇದೆ, ಅದರಲ್ಲೂ ಅಧಿಕಾರಿಗಳು ಸಂವಿಧಾನ ನೀಡಿದ ಹಕ್ಕು ಚಲಾಯಿಸುತ್ತಾರೆ.ಅದಕ್ಕೆ ಚುನಾಯಿತ ಪ್ರತಿನಿಧಿಯಾಗಲಿ ಅಥವಾ ಬೇರೆ ಯಾರೇ ಆಗಲಿ ಅಡ್ಡಿಪಡಿಸುವುದು ಸರಿಯಲ್ಲ. ಸಂಗಮೇಶ್‌ ಪುತ್ರ ಆ ರೀತಿ ಹೇಳಿಕೆ ನೀಡಿದ್ದರೆ ಅದನ್ನು ಖಂಡಿಸುತ್ತೇನೆ. ಅಧಿಕಾರಿಗಳಿಂದ ತಪ್ಪುಗಳಾಗಿದ್ದರೆ ಮೇಲಾಧಿಕಾರಿಗಳಿಗೆ ತಿಳಿಸಬೇಕಾಗಿತ್ತು ಎಂದರು.

ಮಣಿಪುರಕ್ಕೆ ಉತ್ತರ ಕೊಡಿ:

ಮೈಸೂರು ಉದಯಗಿರಿಯಲ್ಲಿ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಪ್ರಕರಣವನ್ನು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೊಲೀಸ್ ಠಾಣೆಗೆ ಕಲ್ಲು ತೂರಾಟ ಆಗುತ್ತದೆ ಎಂದು ಬಿಜೆಪಿ ಟೀಕಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಭಂಡಾರಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಮಣಿಪುರದಲ್ಲಿಯೂ ಅನೇಕ ಅಹಿತಕರ ಘಟನೆಗಳು ನಡೆದಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಮಣಿಪುರದ ರೀತಿಯ ಘಟನೆ ನಡೆಯುತ್ತದೆ ಎಂದು ನಾವು ಹೇಳಬಹುದಾ ಎಂದು ಪ್ರಶ್ನಿಸಿದರು. ಎರಡು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಈಗ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಮೊದಲು ಬಿಜೆಪಿ ಮಣಿಪುರ ಹಿಂಸಾಚಾರಕ್ಕೆ ಉತ್ತರ ಕೊಡಲಿ, ಆಮೇಲೆ ಮೈಸೂರು ವಿಚಾರ ನೋಡೋಣ ಎಂದರು.

..............

ಕುಂಭಮೇಳ: ಅವರವರ ವೈಯುಕ್ತಿಕ ವಿಚಾರಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದಲ್ಲಿ ಮುಳುಗುವವರ ಬಗ್ಗೆ ಟೀಕಿಸುತ್ತಾರೆ. ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕುಂಭಮೇಳದಲ್ಲಿ ಮುಳುಗಿ ಬಂದಿದ್ದಾರೆ ಎಂಬ ಪ್ರಶ್ನೆಗೆ, ಅದನ್ನು ಅವರ ಬಳಿಯೇ ಕೇಳಿ, ಅದು ಅವರವರ ನಂಬಿಕೆಗೆ ಬಿಟ್ಟ, ಅವರ ವೈಯುಕ್ತಿಕ ವಿಚಾರ, ಅವರು ಮಾಡಿದ್ದು ಸರಿ ತಪ್ಪು ಎಂದು ನಾನು ಕಾಮೆಂಟ್ ಮಾಡಲು ಸಾಧ್ಯವಿಲ್ಲಸ, ಅದರಲ್ಲಿ ಮಧ್ಯಪ್ರವೇಶ ಮಾಡಲಿಕ್ಕೂ ಹೋಗುವುದಿಲ್ಲ ಎಂದರು.