ಅಂಗವಿಕಲರಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಎಸ್‌.ಟಿ. ಸೋಮಶೇಖರ್‌

| Published : Mar 08 2024, 01:49 AM IST / Updated: Mar 08 2024, 03:06 PM IST

ಅಂಗವಿಕಲರಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಎಸ್‌.ಟಿ. ಸೋಮಶೇಖರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮೋಹಳ್ಳಿ ಗ್ರಾಮ ಪಂಚಾಯತಿಯಿಂದ ಅಂಗವಿಕಲರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆಂಗೇರಿ

ಅಂಗವಿಕಲರನ್ನು ಅನುಕಂಪದಿಂದ ನೋಡುವ ಬದಲು ಪ್ರತಿಯೊಬ್ಬರೂ ಮಾನವೀಯ ನೆಲೆಯಲ್ಲಿ ಅವರ ನೆರವಾಗಬೇಕು. ಆಮೂಲಕ ಮಾನವಧರ್ಮ ಪಾಲಿಸಬೇಕು ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೋಹಳ್ಳಿ ಗ್ರಾಮ ಪಂಚಾಯತಿಯಿಂದ ಆಯೋಜಿಸಲಾಗಿದ್ದ ಅಂಗವಿಕಲರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರ ವಿಶೇಷ ಆಸಕ್ತಿಯಿಂದಾಗಿ ಕ್ಷೇತ್ರ ವ್ಯಾಪ್ತಿಯ ಅಂಗವಿಕಲರು ಸ್ವಂತ ಮನೆ ಹೊಂದುವ ಕನಸು ನನಸಾಗಿದೆ. 

ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಮಾಜದಲ್ಲಿ ಅಂಗವಿಕಲರಿಗೂ ಉತ್ತಮ ಅವಕಾಶ, ಸ್ಥಾನಮಾನ ನೀಡುವ ಮೂಲಕ ಆರ್ಥಿಕ ಸದೃಢತೆ ಹೊಂದುವಂತೆ ಮಾಡಲು ಪೂರಕ ವಾತಾವರಣ ನಿರ್ಮಿಸಬೇಕು ಎಂದರು.

ರಾಮೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ವೇಣುಗೋಪಾಲ್ ಮಾತನಾಡಿ, ಅಂಗವಿಕಲರಿಗೆ ಸ್ವಂತ ನಿವೇಶನ ನೀಡುವ ಸಂಬಂಧ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗಿರಲಿಲ್ಲ. 

ಆದರೀಗ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಅಂಗವಿಕಲರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರಿಗಿರುವ ಸಾಮಾಜಿಕ ಬದ್ಧತೆ ತೋರಿಸುತ್ತದೆ ಎಂದು ಹೇಳಿದರು.

ಬೆಂಗಳೂರು ದಕ್ಷಿಣ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ। ಬಿಂಧು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುನಿತಾ ಇದ್ದರು.