ಸಾರಾಂಶ
ವಿಧಾನಸಭೆ ಅಧಿವೇಶನ, ರಾಜ್ಯಸಭಾ ಚುನಾವಣೆ ಹಾಗೂ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ಕಾರಣಗಳಿಂದ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ಇರಲಿಲ್ಲ. ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಶಾಸಕರ ಸಹೋದರ, ನಗರಸಭೆ ಸದಸ್ಯ ಬಿ.ಕೆ. ಮೋಹನ್ ಭದ್ರಾವತಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ
ಶಾಸಕರು ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯಲ್ಲಿ ನಿರ್ಲಕ್ಷತನ ವಹಿಸಿಲ್ಲ. ವಿಧಾನಸಭೆ ಅಧಿವೇಶನ, ರಾಜ್ಯಸಭಾ ಚುನಾವಣೆ ಹಾಗೂ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಹಲವು ಕಾರಣಗಳಿಂದ ಕ್ಷೇತ್ರದಲ್ಲಿ ಕೆಲವು ದಿನಗಳಿಂದ ಇರಲಿಲ್ಲ. ಅವರ ವಿರುದ್ಧ ಸುಳ್ಳು ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಶಾಸಕರ ಸಹೋದರ, ನಗರಸಭೆ ಸದಸ್ಯ ಬಿ.ಕೆ. ಮೋಹನ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಬೆಂಗಳೂರಿನಲ್ಲಿದ್ದು ಕಾಲಹರಣ ಮಾಡುತ್ತಿರಲಿಲ್ಲ. ಮೋಜು- ಮಸ್ತಿಯಲ್ಲಿ ತೊಡಗಿರಲಿಲ್ಲ. ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಸಾವಿರಾರು ಮನೆಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಗಳು ಹಾಗೂ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ನಗರಸಭೆ ವ್ಯಾಪ್ತಿಯಲ್ಲಿ ಕೋಟ್ಯಂತರ ರು. ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಕೈಗೊಂಡಿದ್ದಾರೆ ಎಂದರು.
ನಗರದ ಮೈಸೂರು ಕಾಗದ ಕಾರ್ಖಾನೆ ಪುನಾರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇವುಗಳನ್ನು ಅರ್ಥ ಮಾಡಿಕೊಂಡು ಮಾಹಿತಿ ನೀಡಬೇಕು. ಇದೇ ರೀತಿ ಶಾಸಕರು ಇರುವ ಸ್ಥಳಕ್ಕೆ ಅಧಿಕಾರಿಗಳು ಬರುತ್ತಾರೆ, ಅಧಿಕಾರಿಗಳು ಇರುವ ಸ್ಥಳಕ್ಕೆ ಶಾಸಕರು ಹೋಗುತ್ತಾರೆ. ಎಲ್ಲ ಸರ್ಕಾರಿ ಕೆಲಸಗಳು ಶಾಸಕರ ನಿವಾಸದಲ್ಲಿಯೇ ನಡೆಯುತ್ತವೆ ಎಂಬುದು ಸುಳ್ಳು. ಕ್ಷೇತ್ರದ ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದರು.
ಶಾಸಕರ ಕರ್ತವ್ಯದಲ್ಲಿ ಕುಟುಂಬದವರು ಯಾರು ಸಹ ಹಸ್ತಕ್ಷೇಪ ಮಾಡುತ್ತಿಲ್ಲ. ನಮ್ಮ ಕುಟುಂಬಕ್ಕೆ ಜನಸೇವೆ ಮಾಡಲು ಭಗವಂತ ಅಧಿಕಾರ ಕರುಣಿಸಿದ್ದು, ಕ್ಷೇತ್ರದ ಜನರು ನಮ್ಮ ಕುಟುಂಬದ ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದಾರೆ. ಇದನ್ನು ಸಹಿಸದ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಮಾಜಿ ಅಧ್ಯಕ್ಷರಾದ ಅನುಸುಧಾ ಮೋಹನ್ ಪಳನಿ, ಶೃತಿ ವಸಂತಕುಮಾರ್, ಮುಖಂಡರಾದ ಸಿ. ಜಯಪ್ಪ, ಎಚ್. ರವಿಕುಮಾರ್, ಈಶ್ವರಪ್ಪ, ಜಾರ್ಜ್, ಸುಕನ್ಯಾ, ಕೃಷ್ಣಾನಾಯ್ಕ, ದಶರಥಗಿರಿ, ಬಿ.ಗಂಗಾಧರ್, ಗೋಪಿ ಇನ್ನಿತರರು ಉಪಸ್ಥಿತರಿದ್ದರು.
ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿಗೌಡ ಅವರಿಗೆ ರಾಜಕೀಯ ಜ್ಞಾನ ಕಡಿಮೆ. ಶಾಸಕ ಬಿ.ಕೆ. ಸಂಗಮೇಶ್ವರ್ ವಿರುದ್ಧ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾಗಿವೆ. ಮಾಜಿ ಶಾಸಕರಾದ ಅಪ್ಪಾಜಿಗೌಡ ನಿಧನದ ಕಾರಣದಿಂದ ಶಾರದಾ ಅಪ್ಪಾಜಿಗೌಡ ಈ ಬಾರಿ ಚುನಾವಣೆಯಲ್ಲಿ ಮತ ಪಡೆದಿದ್ದಾರೆ ಹೊರತು, ಅವರ ಸ್ವಂತ ಬಲದಿಂದಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರು ಅಪಪ್ರಚಾರಗಳಿಗೆ ಕಿವಿಗೊಡಬಾರದು
- ಬಿ.ಕೆ. ಮೋಹನ್, ಸದಸ್ಯ, ನಗರಸಭೆ, ಭದ್ರಾವತಿ.