ಒಂದಾನೊಂದು ಕಾಲದಲ್ಲಿ ದೇಸಿ ತಳಿಯ ರಾಸುಗಳಿಗೆ ಹೆಸರಾಗಿದ್ದ ಬೋರನಕೊಪ್ಪಲು ಪ್ರದೇಶದಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯಾಗಿರುವುದು ಸಂತಸದ ವಿಷಯ. ಅಮೃತ್ ಮಹಲ್ ಕಾವಲು ಪ್ರದೇಶದ ಸುಮಾರು 20 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣಗೊಂಡಿದ್ದು, ನಿರ್ಗತಿಕ ಹಾಗೂ ತ್ಯಜಿಸಲ್ಪಟ್ಟ ಗೋವುಗಳಿಗೆ ಆಶ್ರಯ ನೀಡಲಾಗುತ್ತಿದೆ. ಈಗಾಗಲೇ ಗೋಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಶೆಡ್‌ಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಪಶುಸಂಗೋಪನಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೋರನಕೊಪ್ಪಲು ಸರ್ಕಾರಿ ಗೋಶಾಲೆಯ ಅಭಿವೃದ್ಧಿಗೆ ಸುಮಾರು ₹ 1 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗೋವುಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಗೋಶಾಲೆಯನ್ನು ಮಾದರಿ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ತಾಲೂಕಿನ ಕಸಬಾ ಹೋಬಳಿಯ ಬೋರನಕೊಪ್ಪಲು ಸರ್ಕಾರಿ ಗೋಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಸಂಗೋಪನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೋಶಾಲೆ ಬಲವರ್ಧನೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತದ ಗ್ರಾಮೀಣ ಜೀವನದಲ್ಲಿ ಹೈನುಗಾರಿಕೆ ಪ್ರಮುಖ ಸ್ಥಾನ ಹೊಂದಿದ್ದು, ದೇಶದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ದೊಡ್ಡ ಪಾಲು ಗ್ರಾಮೀಣ ಭಾಗದಲ್ಲಿಯೇ ನಡೆಯುತ್ತಿದೆ. ರೈತ ಕುಟುಂಬಗಳ ಆರ್ಥಿಕ ಸದೃಢತೆಗೆ ಗೋವುಗಳ ಕೊಡುಗೆ ಅಪಾರವಾಗಿದ್ದು, ಅವುಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ ಎಂದು ಹೇಳಿದರು.ಒಂದಾನೊಂದು ಕಾಲದಲ್ಲಿ ದೇಸಿ ತಳಿಯ ರಾಸುಗಳಿಗೆ ಹೆಸರಾಗಿದ್ದ ಬೋರನಕೊಪ್ಪಲು ಪ್ರದೇಶದಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಯಾಗಿರುವುದು ಸಂತಸದ ವಿಷಯ. ಅಮೃತ್ ಮಹಲ್ ಕಾವಲು ಪ್ರದೇಶದ ಸುಮಾರು 20 ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣಗೊಂಡಿದ್ದು, ನಿರ್ಗತಿಕ ಹಾಗೂ ತ್ಯಜಿಸಲ್ಪಟ್ಟ ಗೋವುಗಳಿಗೆ ಆಶ್ರಯ ನೀಡಲಾಗುತ್ತಿದೆ. ಈಗಾಗಲೇ ಗೋಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಶೆಡ್‌ಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.“ಗಂಡು ಕರುಗಳನ್ನು ನಿರ್ಲಕ್ಷಿಸಿ ಕಸಾಯಿಖಾನೆಗಳಿಗೆ ಒಪ್ಪಿಸುವ ಪ್ರವೃತ್ತಿ ನಿಲ್ಲಬೇಕು. ಅಂತಹ ರಾಸುಗಳನ್ನು ಗೋಶಾಲೆಗೆ ತಂದು ಬಿಡುವ ಮೂಲಕ ಅವುಗಳ ಜೀವ ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು. ಗೋ ಸಂರಕ್ಷಣೆ ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆ ಆಗಬೇಕು,” ಎಂದು ಕರೆ ನೀಡಿದರು. ಮಕ್ಕಳಲ್ಲಿ ಪಶುಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಗೋವುಗಳ ಮಹತ್ವ, ಹೈನುಗಾರಿಕೆಯ ಉಪಯೋಗ ಹಾಗೂ ಗ್ರಾಮೀಣ ಜೀವನದಲ್ಲಿ ಅವುಗಳ ಪಾತ್ರದ ಬಗ್ಗೆ ಶಿಕ್ಷಣ ಸಂಸ್ಥೆಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಗೋವುಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿರುವ ಶಾಸಕ ಶಿವಲಿಂಗೇಗೌಡರ ಬದ್ಧತೆಯಿಂದಲೇ ಈ ಸರ್ಕಾರಿ ಗೋಶಾಲೆ ಸ್ಥಾಪನೆಯಾಗಿದೆ. 1962 ಸಹಾಯವಾಣಿ ಮೂಲಕ ಕರೆ ಮಾಡಿದರೆ ಪಶು ವೈದ್ಯಕೀಯ ತಜ್ಞರು ಮತ್ತು ಆಂಬ್ಯುಲೆನ್ಸ್ ಸೇವೆ ತಕ್ಷಣವೇ ರಾಸುಗಳ ನೆರವಿಗೆ ಧಾವಿಸುತ್ತಿವೆ. ಅರಸೀಕೆರೆ ದೊಡ್ಡ ತಾಲ್ಲೂಕಾಗಿರುವುದರಿಂದ ಹೆಚ್ಚುವರಿ ಪಶು ಆಂಬ್ಯುಲೆನ್ಸ್‌ಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು. ಶಾಸಕರ ಅಭಿವೃದ್ಧಿ ದೃಷ್ಟಿಕೋನದಿಂದ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ, ಕೃಷಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಅವರ ನಾಯಕತ್ವದಿಂದ ಇನ್ನಷ್ಟು ಶಾಶ್ವತ ಯೋಜನೆಗಳು ಜಾರಿಯಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಶುಸಂಗೋಪನಾ ಇಲಾಖೆ ಆಡಳಿತಾಧಿಕಾರಿ ಶಶಿಕಾಂತ್ ಬೂದಾಳ್ ಮಾತನಾಡಿ, ಅರಸೀಕೆರೆ ನಗರದಲ್ಲಿ 1.60 ಕೋಟಿ ವೆಚ್ಚದಲ್ಲಿ ನೂತನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಇಲಾಖೆಯ ಇನ್ನಷ್ಟು ಅಭಿವೃದ್ಧಿಗೆ ಸರ್ಕಾರದ ಸಹಕಾರ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರೈತ ಮುಖಂಡ ಬೋರನಕೊಪ್ಪಲು ಶಿವಮೂರ್ತಿ, ವೈ.ಕೆ. ದೇವರಾಜು, ಡಾ. ಭರತ್, ತಾಪಂ ಮಾಜಿ ಸದಸ್ಯ ಕಾಂತರಾಜು, ಡೇರಿ ಸೋಮಣ್ಣ, ಯಳವಾರೆ ಕೇಶವಮೂರ್ತಿ, ಸೊಸೈಟಿ ಸದಸ್ಯ ಬಿ.ಎಲ್. ರವಿಕುಮಾರ್‌, ಕಲ್ಲೂರಹಳ್ಳಿ ಸತ್ಯಪ್ಪ, ಅಣ್ಣನಾಯಕನಹಳ್ಳಿ ನವೀನ್ ಸೇರಿದಂತೆ ಅನೇಕ ರೈತರು, ಸಾರ್ವಜನಿಕರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.* ಹೇಳೀಕೆ1 2025-26ನೇ ಸಾಲಿನಲ್ಲಿ ಗೋಶಾಲೆ ಕಾರ್ಯಾರಂಭಗೊಂಡಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ, ಚಿಕಿತ್ಸೆ, ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚುತ್ತಿರುವ ರಾಸುಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿರುವುದು ಶ್ಲಾಘನೀಯ.ಶಶಿಕಾಂತ್ ಬೂದಾಳ್, ಪಶುಸಂಗೋಪನಾ ಇಲಾಖೆ ಆಡಳಿತಾಧಿಕಾರಿ