ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಜನರ ಬಹುವರ್ಷಗಳ ನಿರೀಕ್ಷೆಯಾಗಿದ್ದ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ನಗರದ ನಗರಸಭೆ ವೃತ್ತ, ಐ.ಬಿ. ಸರ್ಕಲ್, ಹಾಸನ ಸರ್ಕಲ್‌ಗಳ ಮೂರು ಕಡೆಗಳಲ್ಲಿ ಏಕಕಾಲಕ್ಕೆ ಸಿಗ್ನಲ್ ವ್ಯವಸ್ಥೆ ಜಾರಿಯಾಗಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಪ್ರಮುಖ ಬಿ.ಎಚ್.ರಸ್ತೆಯ ನಗರಸಭೆ ಸರ್ಕಲ್ ಬಳಿ ಸ್ಥಾಪಿಸಲಾಗಿದ್ದ ಟ್ರಾಫಿಕ್ ಸಿಗ್ನಲ್ ದೀಪಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ವಾಹನಗಳ ಓಡಾಟ ಬಹಳಷ್ಟು ಹೆಚ್ಚಳವಾಗಿರುವುದರಿಂದ ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ಈಗ ಸಿಗ್ನಲ್ ಸಿಸ್ಟಂಗೆ ಚಾಲನೆ ನೀಡಿರುವುದರಿಂದ ವಾಹನ ಸಂಚಾರ ಸುಗಮವಾಗಲಿದೆ. ಪ್ರತಿ ಸಿಗ್ನಲ್‌ನಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗುವುದು. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು. ಪ್ರಥಮ ಬಾರಿ ಸಿಗ್ನಲ್ ಸಿಸ್ಟಂ ಅಳವಡಿಸಿರುವ ಕಾರಣ ಮೊದಲ ಮೂರು ದಿನ ಟ್ರಾಫಿಕ್ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ದಂಡ ವಿಧಿಸುವುದಿಲ್ಲ. ನಂತರ ನಿಯಮ ಉಲ್ಲಂಘಿಸಿದರೆ ವಾಹನ ಸವಾರರರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ನಗರದ ಬಿ.ಎಚ್.ರಸ್ತೆಯ ನಗರಸಭೆ ವೃತ್ತದ ಬಳಿ 3ವೇ ಸಿಗ್ನಲಿಂಗ್ ಹಾಗೂ ಐಬಿ ಸರ್ಕಲ್ ಬಳಿ 4ವೇ ಸಿಗ್ನಲಿಂಗ್‌ಗಳಿಗೆ ಒಟ್ಟು 40.32 ಲಕ್ಷ ರು. ಹಾಗೂ ಹಾಸನ ಸರ್ಕಲ್ ಬಳಿ 3ವೇ ಸಿಗ್ನಲಿಂಗ್‌ಗೆ 18.54 ಲಕ್ಷ ರು.ಗಳನ್ನು ಖರ್ಚು ಮಾಡಲಾಗಿದೆ ಎಂದು ಈ ವೇಳೆ ತಿಳಿಸಿದರು.ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಆಯುಕ್ತ ವಿಶ್ವೇಶ್ವರ ಬದರಗಡೆ, ಡಿವೈಎಸ್‌ಪಿ ವಿನಾಯಕ ಶೆಟಗೇರಿ, ತಾಪಂ ಇಒ ಸುದರ್ಶನ್, ಸಿಪಿಐ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್‌ರವರ ಒಪ್ಪಿಗೆ ಪಡೆದು ರಾಜ್ಯ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತಿಪಟೂರು ನಗರಕ್ಕೆ ಅವಶ್ಯಕವಾಗಿರುವ ಪ್ರತ್ಯೇಕ ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಗಳನ್ನು ಶೀಘ್ರ ಸ್ಥಾಪಿಸಲಾಗುವುದು. ಇದರಿಂದ ವಾಹನ ಸಂಚಾರ ನಿಯಂತ್ರಣ ಸಾಧ್ಯವಾಗಲಿದೆ. ’- ಕೆ. ಷಡಕ್ಷರಿ, ಶಾಸಕರು.