ಗೀಜಿಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳಿಗೊಮ್ಮೆ ತಾಲೂಕು ಕಚೇರಿ ಮುಂಭಾಗ ಜನಸ್ಪಂದನ ಸಭೆಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕರು ದೂರದೂರಿನಿಂದ ಕಷ್ಟಪಟ್ಟು ಬಂದು ತಮ್ಮ ಸಮಸ್ಯೆಗಳನ್ನು ಸಲ್ಲಿಸುತ್ತಿದ್ದರೂ, ಅವುಗಳಿಗೆ ನಿಜವಾಗಿ ಪರಿಹಾರ ದೊರಕಿತ್ತೇ ಎಂಬ ಮಾಹಿತಿ ಸ್ಪಷ್ಟವಾಗುತ್ತಿರಲಿಲ್ಲ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸ್ಥರ ಕುಂದುಕೊರತೆಗಳನ್ನು ಸ್ಥಳದಲ್ಲೇ ಆಲಿಸಿ ತಕ್ಷಣ ಪರಿಹಾರ ನೀಡುವ ಉದ್ದೇಶದಿಂದ 28 ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ವಿನೂತನ ‘ಜನಸ್ಪಂದನ’ ಸಭೆಗಳನ್ನು ಪ್ರತಿ ಗ್ರಾಮದಲ್ಲಿಯೇ ನಡೆಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.ತಾಲೂಕಿನ ಗೀಜಿಹಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ ಸಭೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳಿಗೊಮ್ಮೆ ತಾಲೂಕು ಕಚೇರಿ ಮುಂಭಾಗ ಜನಸ್ಪಂದನ ಸಭೆಗಳನ್ನು ನಡೆಸಲಾಗುತ್ತಿತ್ತು. ಸಾರ್ವಜನಿಕರು ದೂರದೂರಿನಿಂದ ಕಷ್ಟಪಟ್ಟು ಬಂದು ತಮ್ಮ ಸಮಸ್ಯೆಗಳನ್ನು ಸಲ್ಲಿಸುತ್ತಿದ್ದರೂ, ಅವುಗಳಿಗೆ ನಿಜವಾಗಿ ಪರಿಹಾರ ದೊರಕಿತ್ತೇ ಎಂಬ ಮಾಹಿತಿ ಸ್ಪಷ್ಟವಾಗುತ್ತಿರಲಿಲ್ಲ ಎಂದು ಹೇಳಿದರು.ಈ ಹಿನ್ನೆಲೆಯಲ್ಲಿ ಜನರ ಮನೆಬಾಗಿಲಿಗೇ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಅಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ಗ್ರಾಮಮಟ್ಟದ ಜನಸ್ಪಂದನ ಸಭೆಗಳನ್ನು ಆರಂಭಿಸಲಾಗಿದೆ. ಈ ಸಭೆಗಳು ದಿನವೂ ರಾತ್ರಿ 11 ಗಂಟೆಯವರೆಗೆ ನಡೆಯುತ್ತಿವೆ ಎಂದು ತಿಳಿಸಿದರು.ಅರಸೀಕೆರೆ ಹಾಸನ ನಡುವೆ ಡಬಲ್ ರಸ್ತೆ ನಿರ್ಮಾಣಕ್ಕೆ 30 ಕೋಟಿ ರು. ಅನುದಾನ ಮಂಜೂರಾಗಿರುವುದನ್ನು ಉಲ್ಲೇಖಿಸಿದ ಶಾಸಕರು, ಗ್ರಾಮ ಸ್ವರಾಜ್ಯ ಸಾಕಾರಗೊಳ್ಳಬೇಕಾದರೆ ಪಿಡಿಒಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಪ್ರಾಮಾಣಿಕವಾಗಿ, ಹಿತಾಸಕ್ತಿಯಿಂದ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವುದು ಶಾಸಕರ ಜವಾಬ್ದಾರಿ. ಆ ನೀರನ್ನು ಸರಿಯಾದ ರೀತಿಯಲ್ಲಿ ಬಳಸಿ ಪ್ರತಿಯೊಬ್ಬ ಗ್ರಾಮಸ್ಥನಿಗೂ ತಲುಪಿಸುವ ಹೊಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳದ್ದು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಗ್ರಾಮಸ್ಥರು ಯಾವುದೇ ತೊಂದರೆ ಅನುಭವಿಸುವುದಿಲ್ಲ ಎಂದು ತಿಳಿಸಿದರು.ತಾಲೂಕಿನಲ್ಲಿ 539 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ರಸ್ತೆ ಸೌಲಭ್ಯ ಒದಗಿಸಲಾಗಿದೆ. ಕೆಲವು ಮಂದಿ ಅದನ್ನು ಅರಿಯದೆ ಟೀಕಿಸುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಧರ್ಮಶೇಖರ್‌, ರಾಜ್ಯದಲ್ಲಿ ಪಂಚಾಯಿತಿ ಮಟ್ಟದಲ್ಲಿ ಇಂತಹ ಜನಸ್ಪಂದನ ಸಭೆಗಳನ್ನು ಎಲ್ಲಿಯೂ ನಡೆಸಲಾಗಿಲ್ಲ. 28 ಅಧಿಕಾರಿಗಳ ಸಮೇತ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಿರುವುದು ನಮ್ಮ ತಾಲೂಕಿನ ಭಾಗ್ಯ ಎಂದು ಹೇಳಿದರು. ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಗೆ ಸೌರಶಕ್ತಿ ಆಧಾರಿತ ನಿರಂತರ ವಿದ್ಯುತ್ ಯೋಜನೆ ಜಾರಿಗೊಂಡಿದೆ. ಮೂರು ಸಾವಿರಕ್ಕೂ ಹೆಚ್ಚು ದೇವಸ್ಥಾನಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಎಲ್ಲ ಸಮುದಾಯಗಳಿಗೆ ಸಮುದಾಯ ಭವನಗಳು, ಶಿಕ್ಷಣ ವಂಚಿತ ಮಕ್ಕಳಿಗಾಗಿ ಮೊರಾರ್ಜಿ ಶಾಲೆಗಳು, ಎಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಕಾಲೇಜುಗಳು ಸ್ಥಾಪನೆಗೊಂಡಿವೆ. ಆರೋಗ್ಯ ಕ್ಷೇತ್ರದಲ್ಲಿಯೂ ಹೋಬಳಿ ಮಟ್ಟದ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಗೊಂಡಿವೆ ಎಂದು ವಿವರಿಸಿದರು.ಕಳೆದ 80 ವರ್ಷಗಳಿಂದ ನಮ್ಮ ತಾಲೂಕಿಗೆ ಸಚಿವ ಸ್ಥಾನ ದೊರಕಿಲ್ಲ, ಆದರೆ ಪ್ರಸ್ತುತ ಶಾಸಕರ ಅಭಿವೃದ್ಧಿ ಕಾರ್ಯಗಳಿಂದ ಅವರು ಸಚಿವರಾಗುವುದು ಖಚಿತ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಉಪ ತಹಸೀಲ್ದಾರ್‌ ಪಾಲಾಕ್ಷ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈರೇಶಣ್ಣ, ಅಣ್ಣಾಯಕನಹಳ್ಳಿ ನಾಗಣ್ಣ, ತಿರುಪತಿ ಗ್ರಾಮ ಪಂಚಾಯ್ತಿಯ ರೂಪ, ವಿವಿಧ ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.