ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸೋಣ ಎಂದ ಶಾಸಕ ಶಿವಲಿಂಗೇಗೌಡ

| Published : Mar 25 2025, 12:50 AM IST

ಸಾರಾಂಶ

ಗ್ರಾಮೀಣ ಕ್ರೀಡೆಗಳು ದೇಹದ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲದೆ ಎಲ್ಲರ ಗಮನವನ್ನು ಸೆಳೆಯುತ್ತವೆ. ಅದೇ ರೀತಿ ಈ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯು ಕೂಡ ಅಷ್ಟೇ ಇದೊಂದು ರೀತಿಯ ಜೆಟಿಯ ಕಾಳಗವಿದ್ದಂತೆ ಹಳ್ಳಿಕಾರ್‌ ಎಂಬುದು ಅದು ಕೇವಲ ಗೋತಳಿ ಅಷ್ಟೇ ಅಲ್ಲ ಅದು ಮೈಸೂರು ಮಹಾರಾಜರ ಕಾಲದಲ್ಲಿಯೇ ಹಳ್ಳಿಕಾರ್ ಎಂಬುದು ಬಹಳ ಹೆಸರುವಾಸಿಯಾಗಿತ್ತು. ಈ ಹಳ್ಳಿಕಾರ್ ಗೋತಳಿಯ ಹಾಲು ಔಷಧೀಯ ಗುಣಗಳನ್ನು ಹೊಂದಿತ್ತು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮರೆತು ಹೋಗಿದ್ದವು ಆದರೆ, ಅವು ಈಗ ಮರುಕಳಿಸುತ್ತಿವೆ. ನಾವೆಲ್ಲ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ತಾಲೂಕಿನ ಬಾಣಾವರ ಪಟ್ಟಣದ ಜಾವಗಲ್ ರಸ್ತೆಯಲ್ಲಿ ಹಳ್ಳಿಕಾರ್ ಗೋ ಪ್ರೇಮಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಿನ ಪೀಳಿಗೆಯು ನಮ್ಮ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ವಾಲಿಬಾಲ್ ಹೀಗೆ ಇನ್ನು ಮುಂತಾದ ಕ್ರೀಡೆಗಳನ್ನು ಮರೆತು ಹೋಗುತ್ತಿದೆ. ಗ್ರಾಮೀಣ ಕ್ರೀಡೆಗಳು ದೇಹದ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲದೆ ಎಲ್ಲರ ಗಮನವನ್ನು ಸೆಳೆಯುತ್ತವೆ. ಅದೇ ರೀತಿ ಈ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯು ಕೂಡ ಅಷ್ಟೇ ಇದೊಂದು ರೀತಿಯ ಜೆಟಿಯ ಕಾಳಗವಿದ್ದಂತೆ ಹಳ್ಳಿಕಾರ್‌ ಎಂಬುದು ಅದು ಕೇವಲ ಗೋತಳಿ ಅಷ್ಟೇ ಅಲ್ಲ ಅದು ಮೈಸೂರು ಮಹಾರಾಜರ ಕಾಲದಲ್ಲಿಯೇ ಹಳ್ಳಿಕಾರ್ ಎಂಬುದು ಬಹಳ ಹೆಸರುವಾಸಿಯಾಗಿತ್ತು. ಈ ಹಳ್ಳಿಕಾರ್ ಗೋತಳಿಯ ಹಾಲು ಔಷಧೀಯ ಗುಣಗಳನ್ನು ಹೊಂದಿತ್ತು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎಂದರು. ಜೊತೆಗೆ ಇದು ಕೇವಲ ಗೋತಳಿ ಅಷ್ಟೇ ಅಲ್ಲ ಯಾವುದೇ ಶುಭ ಕಾರ್ಯಗಳಿಗೆ ಹೊರಟಾಗ ಈ ಹಳ್ಳಿಕಾರ್ ಗೋವುಗಳ ಮುಖದರ್ಶನವನ್ನು ಮಾಡಿಕೊಂಡು ಹೋದರೆ ಶುಭವಾಗುತ್ತದೆ ಎನ್ನುವ ನಂಬಿಕೆ ನಮ್ಮ ಹಿರಿಯರಲ್ಲಿ ಇದೆ. ಆದ್ದರಿಂದ ಇಂತಹ ಹಳ್ಳಿಕಾರ್ ಗೋತಳಿಗಳನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ಹೀಗೆ ಎಲ್ಲಿ ಬೇಕೆಂದರೆ ಅಲ್ಲಿ ನೀವು ಕ್ರೀಡೆಗಳನ್ನು ನಡೆಸುವುದು ಬೇಡ. 5 ಅಥವಾ 6 ಎಕರೆ ಸರ್ಕಾರಿ ಜಾಗವನ್ನು ನೋಡಿ ಅದನ್ನು ನಾನು ಕ್ರೀಡಾಂಗಣವನ್ನಾಗಿ ಮಾಡಿಸುತ್ತೇನೆ ಬಾಣಾವರ ಗ್ರಾಮವು ಈಗ ಪಟ್ಟಣವಾಗಿ ಹೆಸರನ್ನು ಪಡೆಯುತ್ತಿದೆ. ಈಗ ನೀವೆಲ್ಲ ಗ್ರಾಮದ ಜನರಲ್ಲ ಪಟ್ಟಣದ ಜನರಾಗಿದ್ದೀರಿ, ಆದ್ದರಿಂದ ಒಂದು ಕ್ರೀಡಾಂಗಣವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಈ ಜೋಡಿ ಎತ್ತಿನ ಗಾಡಿಯ ಓಟದ ಸ್ಪರ್ಧೆಯನ್ನು ನೋಡುವುದು ರೋಮಾಂಚನಕಾರಿ. ಇಂತಹ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಸಲು ನಮ್ಮ ಪ್ರೋತ್ಸಾಹ ಎಂದೆಂದಿಗೂ ಇರುತ್ತದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಸಿ ಶ್ರೀನಿವಾಸ್ ಮಾತನಾಡಿ, ಧರ್ಮಣ್ಣ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯನ್ನು ನಡೆಸುತ್ತಿರುವುದು ಅವರಿಗಷ್ಟೇ ಅಲ್ಲ, ನಮ್ಮ ಬಾಣಾವರಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ನಾವು ಎಂದೆಂದಿಗೂ ಇಷ್ಟು ಜನರನ್ನು ಇಂತಹ ಕಾರ್ಯಕ್ರಮಗಳನ್ನು ನೋಡಿರಲಿಲ್ಲ. ಹೋದ ಬಾರಿ ರಾಜ್ಯಮಟ್ಟದ ಓಟದ ಸ್ಪರ್ಧೆಯನ್ನು ನಡೆಸಿದರು. ಈ ಬಾರಿ ಅಂತರ್ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯನ್ನು ನಡೆಸಿ ಇತಿಹಾಸವನ್ನು ಸೃಷ್ಟಿಸಿದಂತಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ ಆರ್ ಶ್ರೀಧರ್ ಮಾತನಾಡಿ, ಬಾಣಾವರದಲ್ಲಿ ಯಾವುದೇ ಕ್ರೀಡೆಗಳನ್ನಾಗಲಿ, ಕಾರ್ಯಕ್ರಮಗಳನ್ನಾಗಲಿ ನಡೆಸಿದರೆ ಅದಕ್ಕೆ ನಮ್ಮ ಶಾಸಕರ ಬೆಂಬಲ ಎಂದೆಂದಿಗೂ ಇರುತ್ತದೆ. ಇದು ಶತಸಿದ್ಧ. ಹಳ್ಳಿಕಾರ್ ಗೋ ಪ್ರೇಮಿಗಳ ಸಂಘದಿಂದ ಆವರಿಸಿರುವ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ನಮಗೆಲ್ಲ ಮೈ ರೋಮಾಂಚನಗೊಳಿಸಿದೆ ಎಂದರು,

ಕಾರ್ಯಕ್ರಮದಲ್ಲಿ , ತಾಲೂಕು ಬಗರ್‌ಹುಕುಂ ಕಮಿಟಿಯ ಸದಸ್ಯ ಬಿ ಎಂ ಜಯಣ್ಣ, ಗ್ರಾ ಪಂ ಸದಸ್ಯರಾದ ಆಸಿಫ್,ಬಿ ಎನ್ ಧರ್ಮಣ್ಣ, ಕೃಷ್ಣಮೂರ್ತಿ (ಕಿಟ್ಟಿ )ಗಾರೆ ರವಿಕುಮಾರ್, ಕಚಿಘಟ್ಟ ಮಹೇಶ್, ರಾಯಲ್ ಬಾರ್ ಮಾಲೀಕರಾದ ರಿತೀಶ್ ಶ್ರೀನಿವಾಸ್, ಭರತ್ ರಾಜ್, ಪಶು ವೈದ್ಯರಾದ ಡಾಕ್ಟರ್ ಷಡಕ್ಷರಿ, ಸೇರಿದಂತೆ ಹಳ್ಳಿಕಾರ್ ಗೋ ಪ್ರೇಮಿಗಳ ಸಂಘದ ಅಧ್ಯಕ್ಷ ಹಾಗೂ ಗ್ರಾ ಪಂ ಸದಸ್ಯ ಬಿ ಏನ್ ಧರ್ಮಣ್ಣ ಹಾಗು ಎಲ್ಲಾ ಸದಸ್ಯರು ಹಾಗೂ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

=============

ಚಿತ್ರ : ಹಳ್ಳಿಕಾರ್ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ಮತ್ತು ಸಂಸದರು ಹಾಗೂ ಗಣ್ಯರು.