ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿನ ಹಾಸನ ರಸ್ತೆ ಎಡ ಮತ್ತು ಬಲಭಾಗ ಹಾಗೂ ಸರಸ್ವತಿಪುರಂ ಮತ್ತು ಇಂದಿರಾನಗರಗಳಲ್ಲಿನ ಕೊಳಚೆ ಪ್ರದೇಶ ನಿವಾಸಿಗಳು ಬಹಳ ವರ್ಷಗಳಿಂದ ಅನಧಿಕೃತವಾಗಿ ಊರು ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಇವರು ಅಭಿವೃದ್ಧಿ ಹೊಂದಲು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಚಿಂತನೆ ಕಾರಣವಾಗಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ನಗರಸಭೆ ಆವರಣದಲ್ಲಿ ಆಯೋಜಿಸಿದ ಹಕ್ಕುಪತ್ರಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಸರಸ್ವತಿಪುರಂ ಮತ್ತು ಇಂದಿರಾನಗರಗಳಲ್ಲಿ ಬಹಳ ವರ್ಷಗಳಿಂದ ಸೂರಿಲ್ಲದೇ ಜನ ನೆಮ್ಮದಿ ಇಲ್ಲದ ಜೀವನ ನಡೆಸುತ್ತಿದ್ದರು. ಸರಕಾರದ ವತಿಯಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಈಗಾಗಲೇ ಬಹುತೇಕ ಮನೆಗಳು ಆಗಿದ್ದು ವಾಸವಿದ್ದಾರೆ ಅವರಿಗೆ ಅಧಿಕೃತವಾಗಿ ಹಕ್ಕು ಪತ್ರಗಳು ಇರಲಿಲ್ಲ ಇಂದು ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಮೊದಲು ಕೆಲವರಿಗೆ ನೀಲಿ ಮಂಜೂರು ಪತ್ರ ನೀಡಲಾಗಿದೆ. ಅಲ್ಲದೆ ಈ ಖಾತಾವನ್ನು ಸಹ ಇಂದು ವಿತರಿಸಿದ್ದೇವೆ. ಕಳೆದ ಎರಡು ವರ್ಷಗಳಿಂದ ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ನನ್ನಲ್ಲಿಗೂ ಅನೇಕ ದೂರುಗಳು ಬರುತ್ತಿದ್ದವು ಸಾಮಾನ್ಯ ಸಭೆ ಹೊರತುಪಡಿಸಿ ನಾನು ನಗರಸಭೆಗೆ ಬರುತ್ತಿರಲಿಲ್ಲ. ಈಗ ಇದೀಗ ಅಧ್ಯಕ್ಷ ಸಮೀವುಲ್ಲಾ ಬಂದಿದ್ದಾರೆ. ಇ ಖಾತಾ ಮಾಡಿಸಿಕೊಳ್ಳಬೇಕಾದವರು ಕೇವಲ 75 ರು. ಗಳನ್ನು ಮಾತ್ರ ಕಟ್ಟಿದರೆ ಸಾಕು ಯಾರಿಗೂ ಹಣ ಕೊಡಬೇಕಿಲ್ಲ ಬಿ ಎಚ್ ರಸ್ತೆಯಲ್ಲಿನ ಡಿವೈಡರ್ ಮಧ್ಯದ ವಿದ್ಯುತ್ ದೀಪಗಳು ಅನೇಕವು ಉರಿಯುತ್ತಿರಲಿಲ್ಲ ನಿರ್ವಹಣೆಯು ಇರಲಿಲ್ಲ ಮೂರು ಕೋಟಿ ಮಂಜೂರು ಮಾಡಿಸಿ ಇಂದು ಬಿ ಎಚ್ ರಸ್ತೆ ಝಗಝಗಿಸುತ್ತಿದೆ ಎಂದ ಅವರು, ಸದಸ್ಯರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿಗೆ ಏನು ಬೇಕಾದರೂ ಕೇಳಿ ಅನುದಾನ ತರುತ್ತೇನೆ ಕೊಳಚೆ ನಿವಾಸಿಗಳಿಗೆ ಇನ್ನೂ ಮನೆಗಳು ಅಗತ್ಯವಾದರೆ ಸಂಕೀರ್ಣವನ್ನು ಕಟ್ಟಿಸುವ ಚಿಂತನೆ ಇದೆ ಎಂದರು. ಅಧ್ಯಕ್ಷ ಶಮಿವುಲ್ಲಾ ಶಾಸಕರ ಸಹಕಾರದಿಂದ ನಗರದ ಸರ್ವತೋಮುಖ ಅಭಿವೃದ್ಧಿಗೆ ನಾವು ಪಣತೊಟ್ಟಿದ್ದೇವೆ. ಯಾವುದೇ ಒಂದು ಯೋಜನೆಗಾದರೂ ಶಾಸಕರು ಹಣ ತರುತ್ತಾರೆ. ನಮಗೆ ಶಾಸಕರ ಬಲವಿದೆ ನಗರಸಭೆ ಸದಸ್ಯರು ಇದನ್ನು ಬಳಸಿಕೊಳ್ಳಲು ಹೆಚ್ಚಿನ ಸಹಕಾರವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮನೋಹರ್ ಆಯುಕ್ತ ಕೃಷ್ಣಮೂರ್ತಿ, ಸದಸ್ಯರಾದ ಗಣೇಶ್, ಅನ್ನಪೂರ್ಣ, ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.