ಸಾರಾಂಶ
-ಆತ್ಮಯೋಜನೆಯಡಿ ರೈತರಿಗೆ ತರಬೇತಿ, ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ರಘುಮೂರ್ತಿ
----ಕನ್ನಡಪ್ರಭ ವಾರ್ತೆ ಚಳ್ಳಕೆರೆ:
ಚಳ್ಳಕೆರೆ ಸೇರಿದಂತೆ ರಾಜ್ಯದ ಕೃಷಿ ಕ್ಷೇತ್ರವನ್ನು ಬಲಪಡಿಸಲು ರಾಜ್ಯ ಸರ್ಕಾರ ಅಗತ್ಯಕ್ರಮಗಳನ್ನು ವಿವಿಧ ಯೋಜನೆಗಳ ಮೂಲಕ ಕೈಗೊಳ್ಳುತ್ತಿದೆ. ಅನ್ನದಾತನ ಬದುಕನ್ನು ಹಸನುಗೊಳಿಸಲು ಕೃಷಿ ಇಲಾಖೆ ಸಜ್ಜಾಗಿದ್ದು, ರೈತ ಸಮುದಾಯ ಕೃಷಿ ಅಧಿಕಾರಿಗಳ ಸಲಹೆ ಸೂಚನೆ ಅಳವಡಿಸಿಕೊಂಡು ಕೃಷಿಯಲ್ಲಿ ಆರ್ಥಿಕ ಲಾಭ ಪಡೆದು ಮುಂದಾಗಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.ಅವರು, ನಗರದ ಕೃಷಿ ಇಲಾಖೆ ಆವರಣದಲ್ಲಿ ಆತ್ಮಯೋಜನೆಯಡಿ ರೈತರಿಗೆ ತರಬೇತಿ, ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಳ್ಳಕೆರೆ ತಾ. ಶೇ.೮೦ರಷ್ಟು ಶೇಂಗಾ ಬೆಳೆಯುವ ಪ್ರದೇಶ, ಕೆಲವು ವೇಳೆ ಮಳೆ ಕೈಕೊಟ್ಟರೂ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ, ಶೇಂಗಾ ಬೆಳೆಗೆ ಪರ್ಯಾಯವಾಗಿ ಕಡಿಮೆ ಮಳೆಯಲ್ಲೂ ಲಾಭವಾಗುವ ಬೆಳೆ ಬೆಳೆಯುವಂತೆ ಸಲಹೆ ನೀಡಿದರು. ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸಿ, ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ರಾಜ್ಯ ಸರ್ಕಾರ ೮ ಸಾವಿರ ಕೋಟಿ ವ್ಯಯಿಸಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ೫೩೦೦ ಕೋಟಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಹಣ ನೀಡುವ ಭರವಸೆ ನೀಡಿದ್ದು, ಅದು ಕಾರ್ಯಗತವಾಗಿಲ್ಲವೆಂದರು. ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದರೆ ತಾಲೂಕಿನ ೧೩೫೧೫ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಫಸಲ್ ಭೀಮಾ ಯೋಜನೆಯಡಿ ರೈತರಿಗೆ ೮೩ ಲಕ್ಷ ಹಣ ಮೋಸದಿಂದ ಲಪಟಾಯಿಸಿದ್ದು ಇದರ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ಕೃಷಿ ಇಲಾಖೆಯ ಜಿಲ್ಲಾ ಜಂಟಿನಿರ್ದೇಶಕ ಡಾ.ಬಿ.ಮಂಜುನಾಥ, ರೈತರು ತಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅವಶ್ಯಕವಿರುವ ಎಲ್ಲಾ ಸವಲತ್ತುಗಳನ್ನು ಸರ್ಕಾರ ನೀಡಲಿದೆ, ವಿಶೇಷವಾಗಿ ಇಂದು ನಾಲ್ಕು ಬೆಳೆಗೆ ರೈತರಿಗೆ ಸ್ವಷ್ಟ ಮಾಹಿತಿ ನೀಡಲು ಕರಪತ್ರ ವಿತರಣೆ ಮಾಡಲಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ, ಪಶು, ವನ ಸಖಿಗಳನ್ನು ನೇಮಕ ಮಾಡಿದ್ದು ಅವರ ಮೂಲಕವೂ ಸಹ ಕೃಷಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿವೀರಣ್ಣ ಮಾತನಾಡಿದರು. ಜಿ.ಪಂ. ಕೆಡಿಪಿ ಸದಸ್ಯ ಒ.ರಂಗಸ್ವಾಮಿ, ರೈತ ಮುಖಂಡ ಚಿಕ್ಕಣ್ಣ, ಕೃಷಿ ವಿಜ್ಞಾನಿ ಓಂಕಾರಪ್ಪ, ಬಸವರಾಜು, ವಿರೂಪಾಕ್ಷಪ್ಪ, ರೇವಣ್ಣ, ಗುಡಿಹಳ್ಳಿರಂಗಣ್ಣ, ಉಪ ಕೃಷಿ ನಿರ್ದೇಶಕ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕರಾದ ಜೆ.ಅಶೋಕ್, ಜೀವನ್ ಇದ್ದರು.
-----ಪೋಟೋ: ೧ಸಿಎಲ್‌ಕೆ೪
ಚಳ್ಳಕೆರೆ ನಗರದ ಕೃಷಿ ಇಲಾಖೆ ಆವರಣದಲ್ಲಿ ಆತ್ಮಯೋಜನೆಯಡಿ ರೈತರಿಗೆ ತರಬೇತಿ ಹಾಗೂ ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಉದ್ಘಾಟಿಸಿದರು.