ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಲಿ: ಕೃಷ್ಣಮೂರ್ತಿ ಆಚಾರ್ಯ

| Published : Jul 29 2024, 12:55 AM IST

ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಲಿ: ಕೃಷ್ಣಮೂರ್ತಿ ಆಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮನ ಮೂರ್ತಿಯನ್ನು ನಿರ್ಮಾಣ ಮಾಡಿದ ಹಗರಣದಲ್ಲಿ ಅಧಿಕಾರಿಗಳನ್ನು ಬಲಿಪಶು ಮಾಡಿದ, ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರುದ್ಧ ಎಂದು ಪರಶುರಾಮ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮನ ಮೂರ್ತಿಯನ್ನು ನಿರ್ಮಾಣ ಮಾಡಿದ ಹಗರಣದಲ್ಲಿ ಅಧಿಕಾರಿಗಳನ್ನು ಬಲಿಪಶು ಮಾಡಿದ, ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ವಿರೋಧವಾಗಿ ನಡೆದುಕೊಂಡಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡಲಿ ಎಂದು ಪರಶುರಾಮ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಆಗ್ರಹಿಸಿದ್ದಾರೆ.

ಸುನಿಲ್ ಕುಮಾರ್ ಅವರು ನಕಲಿ ಪರಶುರಾಮ ಮೂರ್ತಿಯನ್ನು ತರಾತುರಿಯಲ್ಲಿ ನಿರ್ಮಿಸಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟಿಸಿದ್ದರು. ಇದೀಗ ಹಗರಣ ಬಯಲಾಗಿ ಬೊಮ್ಮಾಯಿ ಮತ್ತು ಇಡೀ ರಾಜ್ಯಕ್ಕೆ ಮುಜುಗರ ಮಾಡಿದ್ದಾರೆ. ಆದರೂ ಶಾಸಕರ ಪರವಾಗಿ ಹೇಳಿಕೆ ನೀಡುತ್ತಿರುವ ಬೆಂಬಲಿಗರು ತಮ್ಮ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ಕಾಮಗಾರಿಯನ್ನು ಪೂರ್ಣಗೊಳಿಸದೇ, ನಕಲಿ ಪರಶುರಾಮ ವಿಗ್ರಹವನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದು ಯಾಕೆ ಎಂದು ಶಾಸಕರನ್ನು ಕೇಳಲಿ ಎಂದು ಸಲಹೆ ಮಾಡಿದ್ದಾರೆ.

ವಿಧಾನ ಸಭಾ ಚುನಾವಣೆಗೆ ಕೇವಲ 2 ತಿಂಗಳಿರುವಾಗ ನಕಲಿ ಪರಶುರಾಮ ಮೂರ್ತಿಯ ನಿರ್ಮಾಣ, ಮೂರ್ತಿ ನಿರ್ಮಾಣದಲ್ಲಿ ಜಿಎಸ್‌ಟಿ ವಂಚನೆ, ಅಕ್ರಮ ಹಣ ವರ್ಗಾವಣೆ, ಈ ಜಮೀನಿನ ಬಗ್ಗೆ ಸರ್ಕಾರದ ಷರತ್ತನ್ನು ಉಲ್ಲಂಘನೆ, ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ, ನ್ಯಾಯಾಲಯಗಳಲ್ಲಿ ದಾವೆ, ಶಿಲ್ಪಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು, ಅಧಿಕಾರಿಯ ಅಮಾನತ್ತು ಹೀಗೆ ಈ ವಿಚಾರದಲ್ಲಿ ಸಾಲುಸಾಲು ಪ್ರಕ್ರಿಯೆಗಳು ನಡೆದಿವೆ. ಹಗರಣ ನೇರವಾಗಿ ಶಾಸಕ ಕಾಲ ಬುಡಕ್ಕೆ ಬರುವ ಲಕ್ಷಣಗಳು ಇವೆ. ಆದ್ದರಿಂದ ಸತ್ಯವನ್ನು ಜಿಲ್ಲೆಯ ಜನರ ಮುಂದೆ ಹೇಳಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೃಷ್ಣಮೂರ್ತಿ ಆಚಾರ್ಯ ಆಗ್ರಹಿಸಿದ್ದಾರೆ.