ಸಾರಾಂಶ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಈದುವಿನ ಕನ್ಯಾಲು ಮಲೆಕುಡಿಯ ಸಮುದಾಯದ ಮನೆಯೊಂದರಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಗುರುವಾರ ರಾತ್ರಿ ವಾಸ್ತವ್ಯ ಹೂಡಿ ಅಹವಾಲುಗಳನ್ನು ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಈದುವಿನ ಕನ್ಯಾಲು ಮಲೆಕುಡಿಯ ಸಮುದಾಯದ ಮನೆಯೊಂದರಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಗುರುವಾರ ರಾತ್ರಿ ವಾಸ್ತವ್ಯ ಹೂಡಿ ಅಹವಾಲುಗಳನ್ನು ಸ್ವೀಕರಿಸಿದರು.ಮಲೆಕುಡಿಯ ಸಮುದಾಯದ ದಿನೇಶ್ ಗೌಡ, ಪುಷ್ಪ ದಂಪತಿಯ ಜೊತೆಗೆ ವಸಂತ ಗೌಡ, ಸತೀಶ್ ಅವರ ಕಾಡಿನೊಳಗಿರುವ ಮನೆಗೆ ಭೇಟಿ ನೀಡಿದ ಶಾಸಕರು, ಅಲ್ಲಿನ ನಿವಾಸಿಗಳು ಅನುಭವಿಸುವ ಸಮಸ್ಯೆಗಳು, ಮೂಲಸೌಕರ್ಯ, ಸಮುದಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಈ ಕುಟುಂಬಗಳ ಅಭಿವೃದ್ಧಿಗೆ ಸರ್ಕಾರ ಮಟ್ಟದಲ್ಲಿ ಅನುದಾನ ತರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದರು.ಪರಿಸರದ ದೇವಸ್ಥಾನ, ದೈವಸ್ಥಾನ, ಕುಲಕಸುಬು, ಕೃಷಿ ಸಂಬಂಧಿತ ಸಮಸ್ಯೆಗಳನ್ನು ಸಮಾಧಾನ ಚಿತ್ತದಿಂದ ಆಲಿಸಿ ಸ್ಪಂದನೆಯ ಜೊತೆಗೆ ಸ್ಥಳಿಯ ದೈವಸ್ಥಾನವೊಂದರ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದರು.ಡೀಕಯ್ಯ ಗೌಡ ಹಾಗೂ ಸುತ್ತಲಿನ ನಿವಾಸಿಗಳು ಸಂತೃಪ್ತ ಭಾವನೆಯೊಂದಿಗೆ ಶಾಸಕರನ್ನು ಬೀಳ್ಕೊಟ್ಟರು.ಈದು ಕನ್ಯಾ ಲು ಪ್ರದೇಶ ಹೊಸ್ಮಾರುವಿನಿಂದ 15 ಕಿ.ಮೀ. ದೂರದಲ್ಲಿದೆ. ದಟ್ಟ ಅರಣ್ಯದ ನಡುವೆ 11 ಆದಿವಾಸಿ ಮಲೆಕುಡಿಯ ಸಮುದಾಯದ ಕುಟುಂಬಗಳು ವಾಸವಾಗಿವೆ. ಇವರೆಲ್ಲ ಕೃಷಿ ಅವಲಂಬಿತರಾಗಿದ್ದಾರೆ. 2003ರ ನವೆಂಬರ್ 17ರಂದು ನಡೆದ ಎನ್‌ಕೌಂಟರ್‌ನಲ್ಲಿ ಇಲ್ಲಿ ಇಬ್ಬರು ನಕ್ಸಲರು ಬಲಿಯಾಗಿದ್ದರು.