ಅಸಮಂಜಸ ಉತ್ತರ, ತಪ್ಪು ಮತ್ತು ಪೂರ್ಣ ಮಾಹಿತಿ ನೀಡದಿರುವುದು, ಸಭೆಗೆ ವರದಿಯನ್ನೇ ಸಲ್ಲಿಸದಿರುವ ಹಾಗೂ ಗೈರುಹಾಜರಾದ ಅಧಿಕಾರಿಗಳಿಗೆ ಶಾಸಕ ಸಿ.ಬಿ. ಸುರೇಶ್‌ಬಾಬು ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಖಡಕ್ ಎಚ್ಚರಿಕೆ ನೀಡಿದ ಘಟನೆ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಅಸಮಂಜಸ ಉತ್ತರ, ತಪ್ಪು ಮತ್ತು ಪೂರ್ಣ ಮಾಹಿತಿ ನೀಡದಿರುವುದು, ಸಭೆಗೆ ವರದಿಯನ್ನೇ ಸಲ್ಲಿಸದಿರುವ ಹಾಗೂ ಗೈರುಹಾಜರಾದ ಅಧಿಕಾರಿಗಳಿಗೆ ಶಾಸಕ ಸಿ.ಬಿ. ಸುರೇಶ್‌ಬಾಬು ಹಾಗೂ ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಖಡಕ್ ಎಚ್ಚರಿಕೆ ನೀಡಿದ ಘಟನೆ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ನಡೆಯಿತು.

ಪಟ್ಟಣದ ತಾಲೂಕು ಪಂಚಾಯಿತಿ ಸಭೆಯಲ್ಲಿ ಶಾಸಕ ಸಿ.ಬಿ. ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಆರೋಗ್ಯ ಇಲಾಖೆಯ ವರದಿಯಂತೆ ೧೭ ಶಿಶುಮರಣಗಳಾಗಿದೆ. ಇದು ಗಂಭೀರ ವಿಷಯ,ಯಾವ ಕಾರಣಕ್ಕೆ ಶಿಶುಮರಣವಾಗಿದೆ. ತಾಲೂಕಿನಲ್ಲಿ ಗರ್ಭೀಣಿಯರ ಸಂಖ್ಯೆಗನುಗುಣವಾಗಿ ಸರ್ಕಾರಿ ಆಸ್ಪತೆಯಲ್ಲಿ ಹೆರಿಗೆಯಾಗುತ್ತಿಲ್ಲ, ಬೇರೆಡೆಗೆ ವೈದ್ಯರೇ ಬರೆದುಕೊಡುತ್ತಾರೆ ಎಂಬ ದೂರಿದೆ. ವೈದ್ಯರು ಹಾಗೂ ಸೌಲಭ್ಯಗಳಿದ್ದರೂ ಹೆರಿಗೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಹೆಚ್ಚುವಂತೆ ನೋಡಿಕೊಳ್ಳಬೇಕು. ತಾಲೂಕಿನ ದೊಡ್ಡಹೋಬಳಿಯೆನಿಸಿ ಕಂದಿಕೆರೆ ಆರೋಗ್ಯ ಕೇಂದ್ರದಲ್ಲಿ ರಕ್ತಪರೀಕ್ಷೆಯಂತಹ ಸಣ್ಣಪುಟ್ಟ ಪ್ರಯೋಗಾಯವೇ ಇಲ್ಲವೆಂದು ಸದಸ್ಯ ಶಂಕರ್ ಗಮನಸೆಳೆದು ಇಂತಹ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಯಾರುಬರುತ್ತಾರೆ ಎಂದರು.

೫೨ ಮಂದಿ ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಿ ಅವರಿಂದ ೯.೭೨ಲಕ್ಷರೂ ದಂಡವನ್ನು ವಸೂಲು ಮಾಡಲಾಗಿದೆ ಎಂಬ ಮಾಹಿತಿಗೆ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಪ್ರತಿಕ್ರಯಿಸಿದ ಶಾಸಕರು ಅಕ್ರಮ ಬಿಪಿಎಲ್ ಪಡೆದ ಕಾರಣಕ್ಕೆ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಆಹಾರ ಇಲಾಖಾಧಿಕಾರಿಗೆ ಸೂಚಿಸಿದರು. ಹಳ್ಳಿಗಳಲ್ಲಿ ಪಡಿತರವನ್ನು ತಿಂಗಳ ೧೦ನೇ ತಾರಿಕಿನೊಳಗೆ ವಿತರಿಸಿ ಎಂದು ಸಲಹೆ ನೀಡಿದರು.

ಹೇಮಾವತಿ ನಾಲೆಯಿಂದ ತಾಲೂಕಿನ ೨೬ ಕೆರೆಗೆಳಿಗೆ ನೀರುಣಿಸುವ ಯೋಜನೆ ಕಾಮಗಾರಿ ಮುಂದುವರೆದಿದೆ ಎಂದು ಅಧಿಕಾರಿ ಪ್ರಭಾಕರ್ ಮಾಹಿತಿ ನೀಡಿ, ನವಿಲೆ ಭಾಗಕ್ಕೆ ಹರಿಯುವ ಕಾಮಗಾರಿಯಲ್ಲಿ ಅವಾರ್ಡ್‌ ಗಳ ಸಮಸ್ಯೆಯಿಲ್ಲ, ಅನುದಾನದ ಕೊರತೆಯಿಲ್ಲ. ಮಾರ್ಚ್ ಅಂತ್ಯಕ್ಕೆ ಆ ಭಾಗದ ಕಾಮಗಾರಿಯನ್ನು ಹೆಚ್ಚಿನ ಯಂತ್ರೋಪಕರಣಗಳನ್ನು ನಿಯೋಜಿಸಿ ಏಪ್ರಿಲ್ ಗೆ ಮುಗಿಸುತ್ತೇವೆ ಎಂದರು. ಎತ್ತಿನ ಹೊಳೆ ಯೋಜನೆಗೆ ಈ ಹಿಂದೆ ಕೆರೆಗಳಿಗೆ ಹಾಕಿದ ಪೈಪ್‌ಗಳು ತುಕ್ಕುಹಿಡಿಯುತ್ತಿವೆ ಎಂದು ಸಿಂಗದಹಳ್ಳಿ ರಾಜ್‌ಕುಮಾರ್ ಆಕ್ಷೇಪಿಸಿ, ಈ ಕಾಮಗಾರಿ ಯಾವ ಸ್ಥಿತಿಯಲ್ಲಿದೆ ಎಂದು ಪ್ರಶ್ನಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ಮಾಹಿತಿ ನೀಡಿದರು.

ಅರಣ್ಯ ಇಲಾಖೆಯವರು ಗಣಿಭಾದಿತ ಪ್ರದೇಶಾಭಿವೃದ್ದಿಯ ಅಂಕಿ, ಅಂಶದ ಮಾಹಿತಿಯನ್ನು ಸಭೆಗೆ ನೀಡದೆ ಮರೆ ಮಾಚುತ್ತಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಆಕ್ಷೇಪಿಸಿ ರಾಜ್ಯ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರಲಾಗುವುದೆಂದರು. ಸಭೆಗೆ ಹಾಜರಾಗದ ಪೊಲೀಸ್ ಇಲಾಖೆ ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಲಾಯಿತು. ಸರ್ಕಾರ ಹಲವು ಯೋಜನೆಗಳನ್ನು ಅರ್ಹರಿಗೆ ತಪುಪಿಸುವ ನಿಟ್ಟಿನಲ್ಲಿ ಆಯಾ ಇಲಾಖಾ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿರಿ ಎಂದು ಸಿ.ಡಿ. ಚಂದ್ರಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಎಂ. ಮಮತ, ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ ಹಾಗೂ ನಾಮ ನಿರ್ದೇಶಕ ಸದಸ್ಯರು ಭಾಗವಹಿಸಿದ್ದರು.