ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಸನ್ಯಾಸಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಶಾಸಕ ಎಚ್ ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣಕ್ಕೆ ಸಮೀಪ ಇರುವ ಸನ್ಯಾಸಿಹಳ್ಳಿ ಗ್ರಾಮ ಪಂಚಾಯತಿ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಶಾಸಕ ಸುರೇಶ್, ಕಂದಾಯ ಇಲಾಖೆ ಅಧಿಕಾರಿಗಳು ರಿಯಲ್ ಎಸ್ಟೇಟ್ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ. ನಿಮಗೆ ಸಾರ್ವಜನಿಕರ ಕೆಲಸ ಮಾಡಲು ನಿಮಗೆ ಸಾಧ್ಯವಿಲ್ಲದಿದ್ದರೆ ನಮ್ಮ ತಾಲೂಕು ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗವಿಕಲರ ವೃದ್ಧಾಪ್ಯ ವೇತನ, ಮಾಸಾಶನ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತ ಹತ್ತು ಹಲವಾರು ಸಮಸ್ಯೆಗಳು ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಗದರಿಸಿದ ಶಾಸಕರು ವಯಸ್ಸಾದ ನಿಮ್ಮ ತಂದೆ ತಾಯಿ ಸಮಾನರಾಗಿರುವ ಇಂತಹವರಿಗೆ ವೃದ್ಧಾಪ್ಯ ವೇತನ ನೀಡಲು ನಿಮಗೇನು ರೋಗ, ಇನ್ನು ಮಳೆಯಿಂದ ಬಿದ್ದು ಹೋಗಿರುವ ಮನೆ, ರುದ್ರಭೂಮಿ ಮತ್ತು ಕೆರೆಕಟ್ಟೆಗಳನ್ನು ಸರ್ವೆ ಮಾಡಲು ಗ್ರಾಮ ಪಂಚಾಯತಿ ಅಧ್ಯಕ್ಷರೇ ನಿಮಗೆ ಅರ್ಜಿ ಸಲ್ಲಿಸಿದರೆ ಅದನ್ನು ಮೂಲೆಗೆ ಹಾಕುವ ಕೆಲಸ ಮಾಡಿದ್ದೀರ ನಿಮಗೆ ನಾಚಿಕೆ ಆಗಬೇಕು. ನಿಮಗೆ ಕೆಲಸ ಮಾಡುವ ಯೋಗ್ಯತೆ ಇದ್ದರೆ ನನ್ನ ಜೊತೆ ಕೆಲಸ ಮಾಡಿ ಇಲ್ಲದಿದ್ದರೆ ಇಲ್ಲಿಂದ ತೊಲಗಿ ಎಂದ ಅವರು ಬಡವರ ಶಾಪ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹತ್ತಾರು ಸಮಸ್ಯೆಗಳಿದ್ದರೂ ಇಲ್ಲಿಗೆ ದಂಡಾಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಿದ ತಹಸೀಲ್ದಾರ್ ಎಂ ಮಮತಾ, ಸಾರ್ವಜನಿಕರ ಸಮಸ್ಯೆಯನ್ನು ಖುದ್ದಾಗಿ ಆಲಿಸಿದರು. ಈ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಶಾಸಕರು ಮಾತನಾಡಿ ಮೊದಲು ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿ ವೃದ್ಧಾಪ್ಯ ವೇತನ, ರುದ್ರಭೂಮಿ ಹಾಗೂ ಕೆರೆಕಟ್ಟೆ ಸರ್ವೆ ಹಾಗೂ ಮಾವಿನಕೆರೆ ಗ್ರಾಮದಲ್ಲಿ ಇರುವಂತೆ ೯೪ಸಿ ಹಕ್ಕುಪತ್ರವನ್ನು ಮೊದಲು ಅಲ್ಲಿಯ ನಿವಾಸಿಗಳಿಗೆ ಕೊಡುವಂತೆ ತಹಸೀಲ್ದಾರರಿಗೆ ಸೂಚಿಸಿದರು. ನಂತರ ತಹಸೀಲ್ದಾರ್ ಎಂ ಮಮತಾ ಮಾತನಾಡಿ, ಯಾರೂ ೯೪ಸಿ ಅರ್ಜಿಯನ್ನು ಹಾಕಿದ್ದಾರೆ ಅಲ್ಲಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಹಕ್ಕುಪತ್ರಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ತಾಲೂಕಿನಲ್ಲಿ ವೃದ್ಧಾಪ್ಯ ವೇತನ, ಮಾಸಾಶವನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಕಂದಾಯ ಇಲಾಖೆ ವಿದ್ಯುತ್, ನೀರು, ರಸ್ತೆ, ಬೀದಿದೀಪಗಳ ಹತ್ತಾರು ಸಮಸ್ಯೆಗಳ ಅಹವಾಲನ್ನು ಸಾರ್ವಜನಿಕರು ಶಾಸಕರಿಗೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ಉಪಾಧ್ಯಕ್ಷ ಪಾರ್ವತಿ, ಮೋಹನ್ ಕುಮಾರ್, ಜ್ಯೋತಿ, ವೆಂಕಟೇಶ್, ಆಯುಷಾ, ಶ್ರೀಧರ್, ವಿನೋದ, ಪ್ರೇಮಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.