ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಹಲ್ಮಿಡಿ ಗ್ರಾಮದ ರಸ್ತೆಗೆ 6 ಕೋಟಿ ರು. ಅನುದಾನ ತಂದು ಗುಣಮಟ್ಟದ ಕಾಮಗಾರಿಯನ್ನು ನಡೆಸಲಾಗಿದೆ. ಜೆಜೆಎಂ ಕಾಮಗಾರಿ ನಡೆದ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಬಿರುಕು ಕಾಣಿಸಿದ್ದು, ಇದನ್ನೇ ನೆಪ ಮಾಡಿ ಕಳಪೆ ಕಾಮಗಾರಿ ಎಂದು ಕೆಲ ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಕಿಡಿಕಾರಿದರು.ತಾಲೂಕಿನ ಹಲ್ಮಿಡಿ ರಸ್ತೆಗೆ ನಡೆದಿರುವ ಕಾಮಗಾರಿ ಬಗ್ಗೆ ಕೆಲ ಕಾಂಗ್ರೆಸ್ ಮುಖಂಡರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇವರದೇ ಸರ್ಕಾರದಲ್ಲಿ ಅನುದಾನ ನೀಡುತ್ತಿಲ್ಲ ಇಂತಹ ಸಂದರ್ಭದಲ್ಲಿ ನಮ್ಮ ಪರಿಶ್ರಮದಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ಅಧಿಕಾರಿಗಳ ಧೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೈ ಮುಖಂಡರಿಗೆ ತಿರುಗೇಟು ನೀಡಿದರು. ಕನ್ನಡ ಭಾಷೆಗೆ ಪ್ರಥಮ ಶಿಲಾ ಶಾಸನ ನೀಡಿದ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ನನ್ನ ಮೊದಲ ಅಭಿವೃದ್ಧಿ ಕಾರ್ಯವನ್ನು ಹಲ್ಮಿಡಿ ರಸ್ತೆಯಿಂದ ಆರಂಭ ಮಾಡಲಾಗಿದೆ. ಈಗಾಗಲೇ ಆರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಡೆಸಲಾಗಿದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರು, ಸದಸ್ಯರು ಮೊಸರಿನಲ್ಲಿ ಕಲ್ಲು ಹುಡುಕುವಂತೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಶಾಸಕರಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಇಂತಹ ವೇಳೆಯಲ್ಲಿ ನಾನು ಹತ್ತಾರು ಬಾರಿ ಮಂತ್ರಿಗಳ ಭೇಟಿಯಿಂದ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿರುವೆ. ಅದರಲ್ಲೂ ಲೋಕೋಪಯೋಗಿ ಇಲಾಖೆ ಸಚಿವರು ನಮ್ಮ ಮೇಲಿನ ಅಭಿಮಾನದಿಂದ ಬೇಲೂರು ಹೊಳೆಬೀದಿ ಸೇತುವೆಗೆ 35 ಕೋಟಿ ರು. ಹಲ್ಮಿಡಿ ರಸ್ತೆಗೆ 6 ಕೋಟಿ ರು. ಹಾಗೂ ಹೆಬ್ಬಾಳು ಮಲ್ಲನಹಳ್ಳಿ ರಸ್ತೆಗೆ 2 ಕೋಟಿ ರು. ಸೇರಿದಂತೆ ಕ್ಷೇತ್ರದ ನಾನಾ ಭಾಗದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ನಾನು ಯಾವುದೇ ಗುತ್ತಿಗೆದಾರ ಮತ್ತು ಅಧಿಕಾರಿಗಳಲ್ಲಿ ಒಳ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ನಮಗಿಲ್ಲ. ಹಾಗೆಯೇ ಗುಣಮಟ್ಟದ ಕಾಮಗಾರಿಯಲ್ಲಿ ಯಾವುದೇ ರಾಜೀ ಪ್ರಶ್ನೆಯೇ ಇಲ್ಲ ಎಂದರು. ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ತಂತ್ರಗಾರಿಕೆ ವಿಫಲವಾಗಿ ಅವರಿಂದ ಯಾವುದೇ ಉಪಯೋಗ ಆಗಲಿಲ್ಲ ಎಂಬ ಕಾರಣಕ್ಕೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ. ಗುತ್ತಿಗೆದಾರರು ಕಾಮಗಾರಿ ನಡೆಸಿ ಎರಡು ವರ್ಷ ರಸ್ತೆಯ ನಿರ್ವಹಣೆ ಇರುತ್ತದೆ. ಸ್ಥಳೀಯರು ಯಾವ ಕಾರಣಕ್ಕೂ ಇಂತಹ ಬ್ಲಾಕ್‌ಮೇಲ್‌ದಾರರ ಮಾತಿಗೆ ಬೆಂಬಲ ನೀಡಬೇಡಿ ಎಂದ ಅವರು, ಕ್ಷೇತ್ರದಲ್ಲಿನ ಕಾಂಗ್ರೆಸ್ ಮುಖಂಡರು ನನ್ನ ಅಭಿವೃದ್ಧಿ ಕಾರ್ಯವನ್ನು ಸಹಿಸದೆ ಹತಾಶೆ ಮನೋಭಾವದಿಂದ ಆರೋಪ ಮಾಡುತ್ತಿದ್ದಾರೆ. ಅಂತಹ ಕಳಪೆ ಕಂಡರೆ ಶೀಘ್ರವೇ ಬದಲೀ ರಸ್ತೆಯನ್ನು ನಿರ್ಮಿಸಲು ಬದ್ಧವಾಗಿದ್ದು, ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಮಾಡಬಾರದು. ಈಗಾಗಲೇ ಇಂತಹ ಕೆಲಸಕ್ಕೆ ಕಾಂಗ್ರೆಸ್ ಮುಖಂಡರು ಕೈ ಹಾಕಿದ್ದಾರೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಕೃಷ್ಙೇಗೌಡ, ಸೋಮಶೇಖರ, ಸ್ಥಳೀಯ ಮುಖಂಡರಾದ ಕೆಳಹಳ್ಳಿ ಜಯಕುಮಾರ್, ರಾಜಣ್ಣ, ಕೊಡನಹಳ್ಳಿ ಯತೀಶ್, ಹಲ್ಮಿಡಿ ಲೋಕೇಶ್. ಕುಮಾರ್ ಹಾಜರಿದ್ದರು.