ನೂತನ ಶಿಥಿಲೀಕರಣ ಘಟಕಕ್ಕೆ ಶಾಸಕ ಸ್ವರೂಪ್ ಭೂಮಿ ಪೂಜೆ

| Published : Jan 19 2025, 02:16 AM IST

ಸಾರಾಂಶ

ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಶಿಥಿಲೀಕರಣ ಗೃಹ ನಿರ್ಮಾಣದಿಂದ ಶೀಘ್ರವಾಗಿ ರೈತರು ಬೆಳೆದ ಆಲೂಗೆಡ್ಡೆ ಮತ್ತು ತರಕಾರಿಗಳನ್ನು ಶೇಖರಿಸಿಡಲು ಅನುಕೂಲವಾಗಲಿದೆ.

ಹಾಸನ: ರೈತರು ಬೆಳೆದ ಬೆಳೆಗಳ ಶೇಖರಣೆ ಮಾಡಲು ಹಳೆಯ ಶಿಥಿಲೀಕರಣ ಗೃಹ ಶಿಥಿಲಗೊಂಡಿರುವುದರಿಂದ 2 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯವುಳ್ಳ ದೊಡ್ಡ ಮಟ್ಟದ ಶಿಥಿಲೀಕರಣ ಗೃಹವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ತಿಳಿಸಿದರು. ನಗರದ ಎಪಿಎಂಸಿ ಆವರಣದಲ್ಲಿರುವ ತೋಟಗಾರಿಕೆ ಇಲಾಖೆಯಡಿ ಹೊಸದಾಗಿ ಶೈತ್ಯಾಗಾರ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಶಿಥಿಲೀಕರಣ ಗೃಹ ನಿರ್ಮಾಣದಿಂದ ಶೀಘ್ರವಾಗಿ ರೈತರು ಬೆಳೆದ ಆಲೂಗೆಡ್ಡೆ ಮತ್ತು ತರಕಾರಿಗಳನ್ನು ಶೇಖರಿಸಿಡಲು ಅನುಕೂಲವಾಗಲಿದೆ ಎಂದ ಅವರು, ಸದಾಕಾಲ ರೈತರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಆಲೂಗೆಡ್ಡೆ ವರ್ತಕರ ಸಂಘದ ಅಧ್ಯಕ್ಷ ಗೋಪಾಲ ಮಾತನಾಡಿ, ಈ ಹಿಂದೆ ಇದ್ದ ಶಿಥಿಲೀಕರಣ ಗೃಹ ಶಿಥಿಲವಾಗಿತ್ತು. ಹಾಗಾಗಿ ಬಹಳ ದಿನಗಳ ಬೇಡಿಕೆ ಇದಾಗಿತ್ತು, ರೈತರಿಗೆ ಸರ್ಕಾರದಿಂದ ಬಹಳ ಉಪಯುಕ್ತ ಕೆಲಸ ಇದಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ರೈತರು ಆಲೂಗೆಡ್ಡೆಯನ್ನು ಬೆಳೆಯುತ್ತಾರೆ ಹಾಗೂ ಹಳೇಬೀಡು, ಜಾವಗಲ್, ಸಾಲಗಾಮೆ ಭಾಗಗಳಿಂದ ತರಕಾರಿಗಳು ಹೆಚ್ಚಾಗಿ ಬರುತ್ತವೆ. ಇವುಗಳ ಬೆಲೆ ಕುಸಿತವಾದಾಗ ರೈತರಿಗೆ ನೋವಾಗುತ್ತದೆ, ಅಂತಹ ಸಂದರ್ಭದಲ್ಲಿ ಅವುಗಳನ್ನು ಶೇಖರಿಸಿಟ್ಟು ಬೆಲೆ ಏರಿಕೆಯಾದಾಗ ಮಾರಾಟ ಮಾಡಲು ಈ ಶಿಥಿಲೀಕರಣ ಗೃಹ ಪ್ರಯೋಜನವಾಗುತ್ತದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷ ಚಂದ್ರೇಗೌಡ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಗಳ, ಹಿರಿಯ ಸಹಾಯಕ ನಿರ್ದೇಶಕ ಹರ್ಷಿ ತಬ್ಸಂ, ಸಹಾಯಕ ನಿರ್ದೇಶಕ ತೇಜುಕುಮಾರ್, ಇತರರು ಉಪಸ್ಥಿತರಿದ್ದರು.