ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಭಾಷೆ, ಮಾತಿನ ಮೇಲೆ ಹಿಡಿತವಿಲ್ಲದೆ ಹೋರಾಟಗಳು, ಹೋರಾಟಗಾರರ ಬಗ್ಗೆ ಹಗುರವಾಗಿ, ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದು ರೈತ ಹೋರಾಟಗಾರಗಾರ ಸುನಂದಾ ಜಯರಾಂ ಶಾಸಕ ಕೆ.ಎಂ.ಉದಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಸೋಮವಾರ ಮದ್ದೂರು ನಗರಸಭೆಗೆ 4 ಗ್ರಾಮ ಪಂಚಾಯ್ತಿಗಳ ಸೇರ್ಪಡೆ ವಿರೋಧಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ಶಾಸಕರು ಅವರ ವೈಯಕ್ತಿಕ ವಿಚಾರಗಳಿದ್ದರೆ ಮನೆಗೆ ಕರೆದು ಮಾತನಾಡಲಿ. ಅದು ಬಿಟ್ಟು ಸಾರ್ವಜನಿಕವಾಗಿ ಹೋರಾಟ, ಹೋರಾಟಗಾರರು, ಗ್ರಾಪಂ ನಿರ್ಣಯಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸಲು ಯಾರು ಅಧಿಕಾರ ಕೊಟ್ಟರು. ಅಧಿಕಾರಿಗಳಿಗೆ ಸರ್ಕಾರದ ಆದೇಶ ಪಾಲಿಸುವಂತೆ ಕೆಲಸ ಮಾಡಿಸುತ್ತೀರಾ. ನಾವು ಯಾರ ಹಂಗು ಇಲ್ಲದೆ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಇಲ್ಲಿನ ಹೋರಾಟಗಾರರು ಸ್ವಂತ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ. ನೂರಾರು, ಲಕ್ಷಾಂತರ ಜನ ಸ್ವಾಭಿಮಾನಿ ಬದುಕು ನಡೆಸುತ್ತಿದ್ದಾರೆ. ಶಾಸಕರು ಸಿಕ್ಕಾಗ ಕೆಲ ವಿಚಾರಗಳ ಬಗ್ಗೆ ನೇರವಾಗಿ ಅವರೊಂದಿಗೆ ಮಾತನಾಡಬೇಕಿದೆ ಎಂದರು.ತಾಲೂಕಿನ ನಾಲ್ಕು ಗ್ರಾಮ ಪಂಚಾಯ್ತಿಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಜುಲೈ 3ರೊಳಗೆ ನಿರ್ಣಯಿಸಿ ಖುದ್ಧು ವಿಧಾನಸೌಧಕ್ಕೆ ಕೊಟ್ಟು ಪತ್ರ ನೀಡಿ ಗ್ರಾಪಂಗಳ ಸೇರ್ಪಡೆಗೆ ತಡೆ ಮಾಡಬೇಕು ಎಂದು ಹೇಳಿದರು.
ನಾಲ್ಕು ಗ್ರಾಪಂಗಳು ನಗರಸಭೆಗೆ ಸೇರಿಸಲು ಗೆಜೆಟ್ ನಲ್ಲಿ ಪ್ರಕಟಣೆಯಾಗಿದೆ. ಈ ವಿಷಯ ಯಾರಿಂದ ಪ್ರಾರಂಭವಾಯಿತು. ಯಾರು ಸೇರಿಸಿದ್ದಾರೆ ಎಂಬುದನ್ನು ಅಧಿಕಾರಿಗಳು ಉತ್ತರಿಸಬೇಕು. ತರಾತುರಿಯಲ್ಲಿ ಈ ತೀರ್ಮಾನವಾಗಿದ್ದು, ಗ್ರಾಪಂಗಳನ್ನು ನಗರಸಭೆಗೆ ಸೇರಿಸಲು ಅದರದೆ ಆದ ನಿಯಮಗಳಿವೆ. ಇದು ಪಾಲನೆಯಾಗಿಲ್ಲ. ಈಗ ತೆಗೆದುಕೊಂಡಿರುವ ತೀರ್ಮಾನ ಪ್ರಜಾಪ್ರಭುತ್ವ ವ್ಯವಸ್ಥೆ, ಪಂಚಾಯತ್ ರಾಜ್ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ದೂರಿದರು.ಗ್ರಾಮಸಭೆ, ಮಹಿಳಾ, ರೈತ, ಮಕ್ಕಳ ಸಭೆ ಸೇರಿ ಒಟ್ಟು ಸಭೆಗಳನ್ನು ಮಾಡಿ ಇಲ್ಲಿ ಚರ್ಚಿಸಿದ ವಿಷಯಗಳನ್ನು ನಿರ್ಣಯ ತಯಾರಿಸಿ ಅಂಗೀಕಾರ ಮಾಡಿ ಸಹಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಕಳುಹಿಸಬೇಕು. ಈ ವಿಷಯವನ್ನು ಪಿಡಿಒಗಳು ರಾಜಕೀಯ ಒತ್ತಡಗಳಿಗೆ ಒಳಗಾಗಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು, ಸದಸ್ಯರಿಗೆ ತಿಳಿಸದೆ ತರಾತುರಿಯಲ್ಲಿ ಕೈಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿಗಳು ನಗರಸಭೆ ಸೇರ್ಪಡೆ ವಿಷಯದಿಂದ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ. ಗ್ರಾಪಂ, ಹಳ್ಳಿಗಳು ಹಾಗೆ ಇರಬೇಕು. ರೈತರು, ಕೃಷಿ, ಕೂಲಿಕಾರರು, ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಬೇಕು. ನಮ್ಮ ಊರುಗಳ ಇತಿಹಾಸ ಉಳಿಸಲು, ಪಂಚಾಯ್ತಿ, ನಮ್ಮ ಮನೆ, ನಮ್ಮ ಜನ, ನಮ್ಮ ವಸ್ತು, ರಸ್ತೆ, ಹಳ್ಳಿಯಂತೆ ಇರಲು ಬಿಡಬೇಕು ಎಂದು ಆಗ್ರಹಿಸಿದರು.