ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ಕ್ಷೇತ್ರದಲ್ಲಿ ಈಗ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೆಲ್ಲವೂ ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು. ಅವುಗಳಿಗೆ ಶಾಸಕರು ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ. ನಾನು ಸರ್ಕಾರದಿಂದ ಅನುಮೋದನೆ ದೊರಕಿಸಿದ ಯೋಜನೆಗಳನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ವಿರುದ್ಧ ಹರಿಹಾಯ್ದರು.ನಾನು ಶಾಸಕನಾಗಿದ್ದ ಸಮಯದಲ್ಲಿ ೪೮೫ ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಂದ ಅನುಮೋದನೆ ದೊರಕಿಸಿದ್ದೆ. ಆ ಎಲ್ಲಾ ಕಾಮಗಾರಿಗಳಿಗೆ ಮತ್ತೆ ಉದಯ್ ಗುದ್ದಲಿಪೂಜೆ ಮಾಡುತ್ತಿದ್ದಾರಷ್ಟೇ. ಅವರು ಹೊಸದಾಗಿ ಯಾವುದೇ ಯೋಜನೆಗಳನ್ನು ಮದ್ದೂರು ಕ್ಷೇತ್ರಕ್ಕೆ ಮಂಜೂರು ಮಾಡಿಸಿಲ್ಲವೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಹಣಕ್ಕಾಗಿ ಮಣ್ಣು ಮಾರಾಟ:ಮದ್ದೂರು ತಾಲೂಕಿನ ಸೂಳೆಕೆರೆಯನ್ನು ೪೫ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಾಗಿ ಹೇಳಿ ಅದರಲ್ಲಿ ಶೇ.೪೦ರಷ್ಟು ಕಮಿಷನ್ ಹೊಡೆಯಲು ಮುಂದಾಗಿದ್ದಾರೆ. ೧ ಲೋಡ್ ಕೆರೆಮಣ್ಣಿಗೆ ೩೦೦೦ ರು.ನಿಂದ ೩೫೦೦ ರು. ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ಮಾದರಹಳ್ಳಿ, ಶಿಂಗಟಗೆರೆ, ಅಂಬರಹಳ್ಳಿ ಗ್ರಾಮದ ರೈತರೇ ಶಾಸಕರ ನಡೆಯನ್ನು ವಿರೋಧಿಸುತ್ತಿದ್ದಾರೆ ಎಂದು ದೂಷಿಸಿದರು.
ಶೇ.10ರಷ್ಟು ಕಮಿಷನ್ ಬೇಡಿಕೆ:
ಹಳ್ಳಿಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸುವುದಾಗಿ ತಂದ ಪೈಪ್‌ಗಳೆಲ್ಲವೂ ಮದ್ದೂರಿನಿಂದ ಕೆ.ಎಂ.ದೊಡ್ಡಿಯವರೆಗೆ ಎರಡು ವರ್ಷದಿಂದ ಹಾಗೇ ಬಿದ್ದಿವೆ. ಅದಕ್ಕೂ ಶೇ.೧೦ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾದರೆ ಕಾಮಗಾರಿಗಳು ನಡೆಯುವುದು ಹೇಗೆ. ಇದೇನಾ ಇವರು ಮಾಡುತ್ತಿರುವ ಅಭಿವೃದ್ಧಿ. ಕ್ಷೇತ್ರದ ಶಾಸಕರಾಗಿ ಬೇರೆಯವರನ್ನು ಟೀಕಿಸುವುದು ಬಿಟ್ಟು ಜನಪರವಾಗಿ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಮೂಟೆಗಟ್ಟಲೆ ದುಡ್ಡು ಎಲ್ಲಿಂದ ಬರುತ್ತೆ?ನಾನು ಶಾಸಕನಾಗಿದ್ದಾಗ ಮದ್ದೂರು ಕ್ಷೇತ್ರದ ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿದ್ದಾರೆ. ಈಗ ಅವರದ್ದೇ ಸರ್ಕಾರವಿದೆ. ತನಿಖೆ ಮಾಡಿಸಲಿ. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ. ಜೊತೆಗೆ ನಾನು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದೇನೆ. ಅವರಿಗೆ ಎಲ್ಲಿಂದ ಬಂತು ದುಡ್ಡು ಎಂದೂ ಕೇಳಿದ್ದಾರೆ. ೧೯೭೫ ರಿಂದ ಇಲ್ಲಿಯವರೆಗೆ ನಾನು ಕೆಲಸ ಮಾಡಿದ ಸಂಸ್ಥೆಗಳು, ಆದಾಯ ತೆರಿಗೆ ಪಾವತಿ, ಲೋಕಾಯುಕ್ತಕ್ಕೆ ಸಲ್ಲಿಸುತ್ತಿರುವ ಆಸ್ತಿ ವಿವರಗಳನ್ನೆಲ್ಲಾ ಪರಿಶೀಲಿಸಲಿ. ಅಕ್ರಮವಾಗಿ ಹಣ ಸಂಪಾದಿಸಿದ್ದೆ ಸಾಬೀತುಪಡಿಸಲಿ. ಇವರು ಶಾಸಕರಾಗಿ ಬಹಿರಂಗ ಸಭೆಯಲ್ಲೇ ನನಗೆ ಮಂತ್ರಿಗಿರಿ ಬೇಕಿಲ್ಲ, ರಾಜಕಾರಣದ ಅವಶ್ಯಕತೆಯೂ ಇಲ್ಲ. ನಾನಿರುವ ಜಾಗಕ್ಕೆ ಮೂಟೆಯಲ್ಲಿ ದುಡ್ಡು ಬರುತ್ತದೆ ಎಂದಿದ್ದಾರಲ್ಲ. ಆ ಹಣ ಎಲ್ಲಿಂದ ಬರುತ್ತಿದೆ. ಅದರ ಮೂಲವನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದರು.
ಶಾಸಕರ ಇತಿಹಾಸ ಗೊತ್ತಿದೆ:ಇವರ ಇತಿಹಾಸ ಏನೆಂಬುದು ಚೆನ್ನಾಗಿ ಗೊತ್ತಿದೆ. ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬರುವುದಾದರೆ ನಾನು ಈಗಲೇ ಸಿದ್ಧ. ವಿಧಾನಸೌಧದೆದುರೇ ಚರ್ಚೆಯಾಗಲಿ ಅಥವಾ ಮಂಡ್ಯ ಪತ್ರಕರ್ತರ ಭವನದಲ್ಲೇ ನಿಗದಿಪಡಿಸಲಿ. ನಾನು ಬರುತ್ತೇನೆ. ಯಾರು ಯಾರು ಏನೇನು ಸಾಧನೆ ಮಾಡಿದ್ದಾರೆ ಎನ್ನುವುದನ್ನು ಮುಖಾಮುಖಿ ಮಾತನಾಡೋಣ. ಆಗ ಜನರಿಗೆ ಯಾರು ಏನು ಮಾಡಿದ್ದಾರೆಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರ, ಕಂಸಾಗರ ರವಿ, ಜಯರಾಂ, ರಾಜು ಇದ್ದರು.