ಶಾಸಕ ವೈದ್ಯ ೪೪ನೇ ಜನ್ಮದಿನ ಸಂಭ್ರಮ

| Published : Oct 13 2025, 02:03 AM IST

ಸಾರಾಂಶ

ಸವದತ್ತಿಯಲ್ಲಿ ಶಾಸಕ ವಿಶ್ವಾಸ ವೈದ್ಯರವರ ೪೪ನೇ ಹುಟ್ಟು ಹಬ್ಬದ ಅಂಗವಾಗಿ ಸವದತ್ತಿ ಯಲ್ಲಮ್ಮಾ ಪುರಸಭೆ ಆಡಳಿತ ಮಂಡಳಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಸವದತ್ತಿ

ಶಾಸಕ ವಿಶ್ವಾಸ ವೈದ್ಯರವರ ೪೪ನೇ ಹುಟ್ಟು ಹಬ್ಬದ ಸಂಭ್ರಮವನ್ನು ಭಾನುವಾರ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಅಭಿಮಾನಿಗಳು, ಕುಟುಂಬಸ್ಥರು, ಗಣ್ಯರು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಸಿಬ್ಬಂದಿಯವರೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಅಭಿಮಾನಿಗಳು ತನ್ನ ನೆಚ್ಚಿನ ನಾಯಕನಿಗೆ ಶುಭಕೋರಲು ಹಿಂದಿನ ದಿನ ಮಧ್ಯ ರಾತ್ರಿಯಿಂದಲೇ ಶಾಸಕರ ಮನೆಗೆ ಬರಲಾರಂಭಿಸಿದರು. ಭಾನುವಾರ ಬೆಳ್ಳಂಬೆಳಗ್ಗೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹೂಗುಚ್ಛ, ಹೂಮಾಲೆ, ಸಿಹಿ ಹಂಚುವ ಮೂಲಕ ಪ್ರೀತಿಯ ನಾಯಕನಿಗೆ ಸತ್ಕಾರ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದರು. ಇನ್ನೂ ಕೆಲವರು ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಹುಟ್ಟುಹಬ್ಬಕ್ಕೆ ಶುಭ ಕೋರುವ ಅಭಿಮಾನಿಗಳ ಬ್ಯಾನರ್‌ಗಳು, ಬೃಹತ್ ಕಟೌಟ್‌ಗಳು ಜನರಿಗೆ ಸ್ವಾಗತ ಕೋರಿದವು. ವೈದ್ಯ ಫೌಂಡೇಶನ್ ವತಿಯಿಂದ ಶಾಸಕರ ಅನುದಾನದಡಿ ೧೦ ಯಂತ್ರಚಾಲಿತ ದ್ವಿಚಕ್ರ ವಾಹನ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೧೮ ಯಂತ್ರಚಾಲಿತ ದ್ವಿಚಕ್ರ ವಾಹನ ಅಂಗವಿಕಲರಿಗೆ ವಿತರಿಸಲಾಯಿತು. ಹುಟ್ಟುಹಬ್ಬದ ನಿಮಿತ್ತ ಶಾಸಕರ ಸಹೋದರ ಅಶ್ವಥ್ ವೈದ್ಯ ನೇತ್ರತ್ವದಲ್ಲಿ ಅಭಿಮಾನಿಗಳು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಮಠಾಧೀಶರು, ಶಿಕ್ಷಕರು, ಅಧಿಕಾರಿಗಳ ವೃಂದ ಶಾಸಕರ ನಿವಾಸಕ್ಕೆ ಆಗಮಿಸಿ ಶುಭ ಕೋರಿದರು.

ತಮ್ಮ ನೆಚ್ಚಿನ ನಾಯಕನ ಹುಟ್ಟು ಹಬ್ಬಕ್ಕೆ ಆಗಮಿಸಿದ ಎಲ್ಲ ಅಭಿಮಾನಿಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ೫೧ಕ್ಕೂ ಅಧಿಕ ಯುನಿಟ್‌ನಷ್ಟು ರಕ್ತ ಸಂಗ್ರಹವಾಯಿತು. ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆ ಒದಸಲಾಗಿತ್ತು.

ಮುನವಳ್ಳಿಯ ಶ್ರೀ ಮುರಘೇಂದ್ರ ಮಹಾಸ್ವಾಮೀಜಿ, ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಹುಲ ಜಾರಕಿಹೊಳಿ, ಚಂದ್ರಣ್ಣ ಶಾಮರಾಯನವರ, ರವಿ ಯಲಿಗಾರ, ಆರ್.ವಿ.ಪಾಟೀಲ, ಅನಿಕೇತ ಪಟ್ಟಣ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ವೀರೇಶ ಬ್ಯಾಹಟ್ಟಿ, ಬಿ.ಎನ್.ಪ್ರಭುನವರ, ಅಶ್ವತ ವೈದ್ಯ, ಮಂಜುನಾಥ ಪಾಚಂಗಿ, ಮಹಾಬಳೇಶ್ವರ ಪುರದಗುಡಿ, ಶಿವಾನಂದ ಹೂಗಾರ, ಅಲ್ಲಮಪ್ರಭು ಪ್ರಭುನವರ, ಬಸವರಾಜ ಅರಮನಿ, ಶಿವಕುಮಾರ ರಾಠೋಡ, ಮಲ್ಲು ಜಕಾತಿ, ಪ್ರವೀಣ ರಾಮಪ್ಪನವರ, ಬಸವರಾಜ ಹುಗ್ಗಿ ಸೇರಿದಂತೆ ಜಿಲ್ಲೆಯ ಅನೇಕ ಮುಖಂಡರು ಮತ್ತು ಅಭಿಮಾನಿಗಳು ಆಗಮಿಸಿ ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಇಂದು ಆರೋಗ್ಯ ತಪಾಸಣಾ ಶಿಬಿರ

ಅ.೧೩ರಂದು ರಾಮಾಪೂರ ಸೈಟ್ ವಾಲ್ಮೀಕಿ ಭವನದಲ್ಲಿ ವಿಶ್ವಾಸ ವೈದ್ಯ ಚಾರಿಟೇಬಲ್ ಟ್ರಸ್ಟ್, ಎಸ್.ಜಿ.ಶಿಂತ್ರಿ ಶಾಲೆ ಗೆಳೆಯರ ಬಳಗ, ಶಿವಾ ಗೆಳೆಯರ ಬಳಗ, ಗುರ್ಲಹೊಸೂರ, ನಾರಾಯಣ ಹಾರ್ಟ್‌ ಸೆಂಟರ್‌, ಧಾರವಾಡ, ಡಾ.ಅಗರವಾಲ್ಸ್ ಕಣ್ಣಿನ ಆಸ್ಪತ್ರೆ, ಧಾರವಾಡ ಇವರ ಸಹಯೋಗದೊಂದಿಗೆ ಉಚಿತ ಹೃದಯ ಮತ್ತು ಕಣ್ಣು ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.