ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೂಡಂಗಡಿ ಹಾಗೂ ಫೆಕ್ಸ್‌ ತೆರವು ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗೂಡಂಗಡಿ ಹಾಗೂ ಫೆಕ್ಸ್‌ ತೆರವು ವಿಚಾರದಲ್ಲಿ ಅಧಿಕಾರಿಗಳು ತಾರತಮ್ಯ ನಡೆಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್‌ನ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್‌ ಆರೋಪಿಸಿದ್ದಾರೆ.

ಮಂಗಳವಾರ ನಗರದ ಅಟಲ್‌ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ ಕದ್ರಿ ಪಾರ್ಕ್‌, ಲೇಡಿಹಿಲ್‌ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಧಿಕಾರಿಗಳು ಗೂಡಂಗಡಿ ತೆರವುಗೊಳಿಸಿದ್ದಾರೆ. ಕಾಂಗ್ರೆಸ್‌ ಮುಖಂಡರು ಸೂಚಿಸಿದ ಕಡೆಗಳಲ್ಲಿ ಮಾತ್ರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಉಳಿದ ಕಡೆಗಳಲ್ಲಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.

ಗೂಡಂಗಡಿಗಳನ್ನು ತೆರವುಗೊಳಿಸಲೇ ಬೇಕು ಎಂದಾದರೆ ಎಲ್ಲವನ್ನೂ ತೆರವುಗೊಳಿಸಬೇಕು. ಇಲ್ಲದಿದ್ದರೆ ಯಾವುದನ್ನೂ ಮುಟ್ಟಬೇಡಿ. ಅದು ಬಿಟ್ಟು ಕಾಂಗ್ರೆಸ್‌ ಮುಖಂಡರ ಅಣತಿಯಂತೆ ಪಾಲಿಕೆ ಅಧಿಕಾರಿಗಳ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಇದ್ದಾಗ ಇಂತಹ ಅನ್ಯಾಯಗಳಿಗೆ ಆಸ್ಪದ ಇರಲಿಲ್ಲ. ಈಗ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದೆ ನೇರವಾಗಿ ಆಡಳಿತಾಧಿಕಾರಿಗಳ ಆಡಳಿತ ಇದ್ದು, ಇದು ಕಾಂಗ್ರೆಸ್‌ ಮುಖಂಡರ ನಿರ್ದೇಶನದಂತೆ ನಡೆಯುತ್ತಿದೆ. ವಿನಾ ಕಾರಣ ಬಡವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಕಮ್ಯುನಿಸ್ಟರು ಕೂಡ ಅವರ ಪಕ್ಷದವರನ್ನು ಹೊರತುಪಡಿಸಿ ಬೇರೆಯವರ ಗೂಡಂಗಡಿ ಎತ್ತಂಗಡಿ ಬಗ್ಗೆ ಮಾತನಾಡುತ್ತಿಲ್ಲ ಎಂದರು. ಫ್ಲೆಕ್ಸ್‌ ನಿಯಮ ಯಾರಿಗೆ?:

ನಗರ ಭಾಗದಲ್ಲಿರುವ ಫ್ಲೆಕ್ಸ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಿರುವ ಪಾಲಿಕೆ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಆಗಮಿಸುವಾಗ, ಕಾಂಗ್ರೆಸ್‌ ಕಾರ್ಯಕ್ರಮಗಳು ನಡೆಯುವಾಗ, ಕಾಂಗ್ರೆಸ್‌ ಮುಖಂಡರ ನೇತೃತ್ವದಲ್ಲಿ ಕ್ರೀಡೆಗಳು ನಡೆಯುವಾಗ ಹಾಕುವ ಬ್ಯಾನರ್‌, ಫ್ಲೆಕ್ಸ್‌ಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೇದವ್ಯಾಸ್‌ ಕಾಮತ್‌ ಪ್ರಶ್ನಿಸಿದರು.

ದೇವಸ್ಥಾನ, ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳ ಫ್ಲೆಕ್ಸ್‌ಗಳನ್ನು ಕಂಡ ಕೂಡಲೇ ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘನೆ ಎಂದು ಓಡಿ ಬರುತ್ತಾರೆ. ಈಗಾಗಲೇ ಉರ್ವ ಮಾರಿಗುಡಿ ಸೇರಿದಂತೆ ಅಯ್ಯಪ್ಪ ಸ್ವಾಮಿಯ ಫ್ಲೆಕ್ಸ್‌ಗಳನ್ನೂ ತೆಗೆದು ಹಾಕಿದ್ದಾರೆ. ಹಾಗಾದರೆ ಫ್ಲೆಕ್ಸ್‌ ನಿಯಮಗಳು ಜನಸಾಮಾನ್ಯರಿಗೆ ಮಾತ್ರ, ಕಾಂಗ್ರೆಸ್‌ನವರಿಗೆ ಅನ್ವಯವಾಗುವುದಿಲ್ಲ ಎಂಬುದು ಸಾಬೀತಾದಂತಾಗಿದೆ ಎಂದರು.

ಕಾಂಗ್ರೆಸ್‌ ಕಚೇರಿಯಂತಾದ ಪಾಲಿಕೆ!:

ಪಾಲಿಕೆ, ಜಿಲ್ಲೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದ ಕಾರಣ ಅಧಿಕಾರಿಗಳು ಕೂಡ ಜನಪರ ಕೆಲಸ ಮಾಡುವುದು ಬಿಟ್ಟು ಕಾಂಗ್ರೆಸ್‌ನ ಕೈಗೊಂಬೆಯಾದಂತಿದೆ. ಎಲ್ಲರೊಂದಿಗೆ ಸಮಾನರಂತೆ ವರ್ತಿಸುವುದು ಬಿಟ್ಟು ಪಾಲಿಕೆಯೇ ಕಾಂಗ್ರೆಸ್‌ ಕಚೇರಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ವೇದವ್ಯಾಸ್‌ ಕಾಮತ್‌ ಟೀಕಿಸಿದರು.

ಪಾಲಿಕೆ ಆಡಳಿತ ವಿಫಲ:

ಈ ಹಿಂದೆ ಸ್ವಚ್ಛತೆಗೆ ಹೆಸರಾಗಿದ್ದ ಮಂಗಳೂರು ಈಗ ವಿಪರೀತ ಕಸದ ಸಮಸ್ಯೆ ಎದುರಿಸುತ್ತಿದೆ. ಪಾಲಿಕೆಯ ಬೀದಿ ಬೀದಿಗಳಲ್ಲಿ ರಾಶಿ ಕಸ ಸಹಿತ ಕಟ್ಟಡ ಕಾಮಗಾರಿಗಳ ಅವಶೇಷ ಕಂಡುಬರುತ್ತಿದೆ. ಅವುಗಳನ್ನು ವಿಲೇವಾರಿ ಮಾಡುವ ಯೋಗ್ಯತೆ ಇಲ್ಲದ ಪಾಲಿಕೆಯಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸುವಲ್ಲಿ ವೀರಾವೇಶ ಪ್ರದರ್ಶಿಸುತ್ತಿರುವುದು ವಿಪರ್ಯಾಸ ಎಂದರು.

ಮಂಗಳೂರು ಜೈಲಿನ ಜಾಮರ್‌ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಂದ ತೊಡಗಿ ಹೈಕೋರ್ಟ್‌ ವರೆಗೆ ಸಮಸ್ಯೆ ತಲುಪಿದರೂ ಪರಿಹಾರ ಕಂಡಿಲ್ಲ ಈ ಎಲ್ಲ ವೈಫಲ್ಯಗಳ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.

ಮುಖಂಡರಾದ ರಮೇಶ್‌ ಕಂಡೆಟ್ಟು, ರಮೇಶ್‌ ಹೆಗ್ಡೆ, ಭಾಸ್ಕರಚಂದ್ರ ಶೆಟ್ಟಿ, ಲಲ್ಲೇಶ್‌ ಇದ್ದರು.