ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ/ ಹಿರಿಯೂರು
ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸುವುದು ಅಗತ್ಯವೆಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪೋಲಿಯೊ ಮುಕ್ತ ರಾಷ್ಟ್ರ ಮಾಡಲು ಅಭಿಯಾನ ನಡೆಯುತ್ತಿದೆ. 2009 ರಿಂದ ರಾಜ್ಯದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ಇಲ್ಲದಿರುವುದು ಹೆಮ್ಮೆಯ ವಿಷಯವಾಗಿದೆ. ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಇನ್ನು ಪೋಲಿಯೊ ಪ್ರಕರಣಗಳು ಪತ್ತೆಯಾಗುತ್ತಿದ್ದು ಹಾಗಾಗಿ ಇಲ್ಲಿ ಅಭಿಯಾನ ಆರಂಭ ಮಾಡಿದ್ದೇವೆ. ಸದೃಡ ಆರೋಗ್ಯವಂತ ಮಕ್ಕಳು ಇರಬೇಕು ಎನ್ನುವ ಉದ್ದೇಶ ದಿಂದ ಸರ್ಕಾರ ಈ ಕಾರ್ಯಕ್ರಮ ಮಾಡುತ್ತಿದೆ ಎಂದರು.ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಮಾತನಾಡಿ, ಪೋಲಿಯೊ ಮುಕ್ತ ರಾಷ್ಟ್ರ ಮಾಡುವ ಉದ್ದೇಶದಿಂದ ಸರ್ಕಾರಗಳು ಪೋಲಿಯೊ ಲಸಿಕಾ ಅಭಿಯಾನ ಹಮ್ಮಿ ಕೊಂಡಿವೆ. ಪ್ರಸ್ತುತ ಜಿಲ್ಲೆಯಲ್ಲಿ 135105 ಮಕ್ಕಳಿಗೆ ಪೋಲಿಯೊ ಲಸಿಕೆ ಮೀಡುವ ಗುರಿ ಹೊಂದಲಾಗಿದ್ದು, ಒಟ್ಟು 1084 ಬೂತ್ ಗಳನ್ನ ನಿರ್ಮಾಣ ಮಾಡಲಾಗಿದೆ. ಮಾರ್ಚ್ 4 ರಿಂದ 6ರವರೆಗೆ ಮನೆ ಮನೆ ಬೇಟಿ ನೀಡಿ ಪೋಲಿಯೊ ಲಸಿಕೆ ಹಾಕಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ಕೊಟ್ಟು ಪೋಲಿಯೊ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ವಾಸ್ಥ್ಯ ಫೌಂಡೇಷನ್ ನ ಸಂಸ್ಥಾಪಕಿ ಡಾ.ತೋಯಿಜಾಕ್ಷಿ ಬಾಯಿ ಅವರು ಆಶಾ ಕಾರ್ಯಕರ್ತೆಯರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಿಳಿ ಕೊಡೆಗಳ ಉಚಿತವಾಗಿ ವಿತರಣೆ ಮಾಡಿದರು.ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಅಭಿನವ್ ಡಿ. ಎಂ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಡಿಸ್ಟ್ರಿಕ್ಟ್ ಸರ್ಜನ್ ರವೀಂದ್ರ, ಮೆಡಿಕಲ್ ಕಾಲೇಜಿ ಆಡಳಿತಾಧಿಕಾರಿ ಯುವರಾಜ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ: ಸಚಿವ ಸುಧಾಕರ್ ಸಲಹೆಹಿರಿಯೂರು: ಮಕ್ಕಳು ದೇಶದ ಭವಿಷ್ಯವಾಗಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಆಗಿದ್ದು ಅವರ ಆರೋಗ್ಯ ಬಾಲ್ಯದಿಂದಲೇ ಸದೃಢವಾಗಬೇಕಿದೆ. ಮಕ್ಕಳನ್ನು ಪೋಲಿಯೋ ಮಾತ್ರವಲ್ಲದೆ ಇತರ ಅನೇಕ ಸಂಕೀರ್ಣ ಕಾಯಿಲೆಗಳಿಂದ ಸುರಕ್ಷಿತವಾಗಿಸಬೇಕಿದೆ. ವಿಶೇಷವಾಗಿ ಪೋಲಿಯೋ ತಡೆಗಟ್ಟಲು ಚಿಕ್ಕ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮುಂತಾದವರು ಹಾಜರಿದ್ದರು.