ಸಾರಾಂಶ
ಕಡಲ್ಕೊರೆತ ಪ್ರದೇಶದಲ್ಲಿ ಈಗಾಗಲೇ ಹಲವು ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ಹಲವು ಮನೆಗಳು ಹಾಗೂ ಲಕ್ಷ್ಮೀ ನಾರಾಯಣ ಭಜನ ಮಂದಿರದ ಬಳಿಯ ತಡೆಗೋಡೆ ಸಮುದ್ರ ಪಾಲಾಗುವ ಸಂಭವವಿದೆ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕೆಮ್ಮಣ್ಣು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಜ್ಜರಬೆಟ್ಟು ಪ್ರದೇಶದಲ್ಲಿ ಕಡಲ್ಕೊರೆತ ಪೀಡಿತ ಭಾಗಗಳಿಗೆ ಅಧಿಕಾರಿಗಳೊಂದಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಡಲ್ಕೊರೆತ ಪ್ರದೇಶದಲ್ಲಿ ಈಗಾಗಲೇ ಹಲವು ತೆಂಗಿನ ಮರಗಳು ಕೊಚ್ಚಿ ಹೋಗಿದ್ದು, ಹಲವು ಮನೆಗಳು ಹಾಗೂ ಲಕ್ಷ್ಮೀ ನಾರಾಯಣ ಭಜನ ಮಂದಿರದ ಬಳಿಯ ತಡೆಗೋಡೆ ಸಮುದ್ರ ಪಾಲಾಗುವ ಸಂಭವವಿದ್ದು, ತಕ್ಷಣ ತುರ್ತು ಕಾಮಗಾರಿಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳದಲ್ಲೇ ಮೀನುಗಾರಿಕೆ ಸಚಿವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಯ ಗಂಭೀರತೆ ಬಗ್ಗೆ ಚರ್ಚಿಸಿ ತಕ್ಷಣ ಕಡಲ್ಕೊರೆತ ತಡೆ ಕಾಮಗಾರಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು ಹಾಗೂ ಮಂಗಳವಾರ ಕರಾವಳಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅನುದಾನ ಬಿಡುಗಡೆಗೆ ಮನವಿ ಮಾಡುವುದಾಗಿ ತಿಳಿಸಿದರು.ಈ ಸಂದರ್ಭ ಉಡುಪಿ ತಹಸೀಲ್ದಾರ್ ಗುರುರಾಜ್, ಕೆಮ್ಮಣ್ಣು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಸುಮ ರವೀಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಪುರಂದರ, ಪ್ರಶಾಂತ್, ಸ್ಥಳೀಯ ಮುಖಂಡರಾದ ಮುತ್ತ, ಬಂದರು ಇಲಾಖೆಯ ಅಧಿಕಾರಿಗಳು, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.