ಕುಡಿಯುವ ನೀರು ಟಾಸ್ಕ್‌ಫೋರ್ಸ್‌ ಅನುದಾನ ಬಿಡುಗಡೆಗೆ ಶಾಸಕ ಆಗ್ರಹ

| Published : Mar 12 2024, 02:04 AM IST

ಸಾರಾಂಶ

ಸೋಮವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕೂಡಲೇ ಟಾಸ್ಕ್ ಫೋರ್ಸ್ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕುಡಿಯುವ ನೀರಿನ ಯೋಜನೆಗೆ ತಾಲೂಕಿಗೆ ಟಾಸ್ಕ್ ಫೋರ್ಸ್ ನಲ್ಲಿ ಹಣ ಬಿಡುಗಡೆಯಾಗದ ಕಾರಣ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಜಿಲ್ಲೆಯಲ್ಲಿ ಮಂಗಳೂರು ಹಾಗೂ ಮೂಡುಬಿದಿರೆ ಹೊರತುಪಡಿಸಿ ಇತರೆಡೆಗೆ ಈ ಬಾರಿ ಟಾಸ್ಕ್ ಫೋರ್ಸ್ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಕೂಡಲೇ ಟಾಸ್ಕ್ ಫೋರ್ಸ್ ಅನುದಾನ ಬಿಡುಗಡೆಗೊಳಿಸಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದ್ದಾರೆ.

ಸೋಮವಾರ ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಿಡಿಒಗಳು ತಾಲೂಕಿನಲ್ಲಿರುವ ಕುಡಿಯುವ ನೀರಿನ ಬಗೆಗೆ ಸರಿಯಾದ ಪರಿಶೀಲನೆ ನಡೆಸಿ ತಾಲೂಕು ಪಂಚಾಯತ್ ಇಒ ಅವರಿಗೆ ವರದಿ ನೀಡಬೇಕು. ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಂದಿನ 20 ದಿನಗಳಲ್ಲಿ ಮತ್ತೆ ಸಭೆ ಕರೆದು ಚರ್ಚೆ ನಡೆಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನೀರಿನ ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಬದಲಿ ವ್ಯವಸ್ಥೆ ಕೈಗೊಳ್ಳುವ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಇತರ ಅಗತ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ನೀರು, ವಿದ್ಯುತ್ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತೀವ್ರ ಅಭಾವ ಉಂಟಾಗುತ್ತಿದೆ. ಕಾಂಗ್ರೆಸ್ ಸರ್ಕಾರ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಿರುವ ಕುರಿತು ಹೇಳಿಕೆ ನೀಡುತ್ತಿದ್ದರು ಇದು ಬೆಳ್ತಂಗಡಿ ತಾಲೂಕಿಗೆ ನಲ್ಲಿ ಕಂಡು ಬರುತ್ತಿಲ್ಲ. ಇಲ್ಲಿ ಪವರ್ ಕಟ್, ಲೋಡ್ ಶೆಡ್ಡಿಂಗ್ ನಿಂದ ವಿದ್ಯಾರ್ಥಿಗಳು, ಕೃಷಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.ತುರ್ತು ಗಮನಹರಿಸಿ:

ತಾಲೂಕು ಪಂಚಾಯಿತಿ ಇಒ ಭವಾನಿ ಶಂಕರ್ ಮಾತನಾಡಿ, ಪಂಚಾಯಿತಿಗಳು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಹೆಚ್ಚುವರಿ ಪಂಪುಗಳನ್ನು ಇಟ್ಟುಕೊಳ್ಳಬೇಕು. ಮೀಟರ್ ಬೋರ್ಡ್ ಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಹೆಚ್ಚುವರಿ ಪೈಪ್ ಲೈನ್ ನಿರ್ಮಾಣ ಇತ್ಯಾದಿಗೆ 15ನೇ ಹಣಕಾಸು ಯೋಜನೆ ಅಥವಾ ಸ್ವಂತ ನಿಧಿಯಿಂದ ಅನುದಾನ ಬಳಕೆ ಮಾಡಿ ವ್ಯವಸ್ಥೆ ಕೈಗೊಳ್ಳಬೇಕು, ಜೆಜೆಎಂ ಯೋಜನೆಯ ಸಮಸ್ಯೆಗಳ ಬಗ್ಗೆ ತುರ್ತು ಗಮನಹರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಜೆಜೆಎಂ ಕಾಮಗಾರಿ ಅಡ್ಡಿ:ತಾಲೂಕಿನಲ್ಲಿ ಕುಡಿಯುವ ನೀರಿನ ಪೂರೈಕೆಗೆ ಪ್ರಮುಖವಾಗಿ ಅಡ್ಡಿಯಾಗಿರುವುದು ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಎಂಬ ವಿಚಾರ ಸಭೆಯಲ್ಲಿ ತೀವ್ರವಾಗಿ ಚರ್ಚೆಗೊಳಗಾಯಿತು. ಲಾಯಿಲ, ಹೊಸಂಗಡಿ, ಮುಂಡಾಜೆ, ಕಾಶಿಪಟ್ಣ, ಮರೋಡಿ,ಬೆಳಾಲು, ಕಲ್ಮಂಜ,ಕಳಿಯ, ಬಾರ್ಯ,ನಾರಾವಿ, ಮಚ್ಚಿನ, ವೇಣೂರು, ನೆರಿಯ,ನಾವೂರು, ಅಂಡಿಂಜೆ, ಕೊಕ್ರಾಡಿ ನಿಡ್ಲೆ, ಕಳೆಂಜ, ಶಿರ್ಲಾಲು, ಕುವೆಟ್ಟು,ಇಂದಬೆಟ್ಟು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪೈಪ್ ಲೈನ್ ಪೂರ್ಣಗೊಳ್ಳದೆ, ವಿದ್ಯುತ್ ಸಂಪರ್ಕವಾಗದೆ, ವಿದ್ಯುತ್ ಪರಿವರ್ತಕ ಅಳವಡಿಕೆಯಾಗದೆ, ಪಂಪುಗಳನ್ನು ಅಳವಡಿಸದೆ ಸಮಸ್ಯೆಯಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಳಲು ವ್ಯಕ್ತಪಡಿಸಿದರು ಮುಂದಿನ ಎರಡು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಲಾಖೆಗೆ ಶಾಸಕರು ಸೂಚಿಸಿದರು.

ಬೆಳ್ತಂಗಡಿ ಪಶು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರವಿಕುಮಾರ್, ಪಿಡಬ್ಲ್ಯೂಡಿ ಎಇಇ ನಿತಿನ್ ನಾಯ್ಕ್ ಹಾಗೂ ಇಲಾಖಾಧಿಕಾರಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.------

ಕಳಂಜದಲ್ಲಿ ಅರಣ್ಯ ಇಲಾಖೆಯವರಿಗೆ ಜಂಟಿ ಸರ್ವೆ ನಡೆಸಬೇಕು ಎಂದು ಹೇಳಲಾಗಿತ್ತು. ಇಲಾಖೆಯವರು ಅಲ್ಲಿ ಪಂಚಾಯತಿಗೆ ಯಾವುದೇ ಮಾಹಿತಿ ಕೊಡದೆ ಸರ್ವೇ ಮಾಡಿ ಒತ್ತುವರಿ ಮಾಡಿಕೊಂಡವರ ಪಟ್ಟಿ ನೀಡಿದೆ. ಆದರೆ ಹಲವಾರು ವರ್ಷಗಳಿಂದ ಬದುಕು ಸಾಗಿಸುತ್ತಿದ್ದಾರೆ. ಹೀಗಾಗಿ ಪಂಚಾಯತಿ ಪಿಡಿಓ ಅವರು ಇಲಾಖೆಗೆ ಉತ್ತರ ನೀಡಲು ಹೋಗಬಾರದು. ಜನಪ್ರತಿನಿಧಿಗಳ ಸಮ್ಮುಖದಲ್ಲಿ ಯಾವುದು ಅಧಿಕೃತ ಯಾವುದು ಅನಧಿಕೃತ ಎಂದು ನಿರ್ಧರಿಸಬೇಕೆ ಹೊರತು ಇಲಾಖೆ ಏಕಾಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. -ಹರೀಶ್‌ ಪೂಂಜ, ಬೆಳ್ತಂಗಡಿ ಶಾಸಕ.