ಶಾಲೆ, ಊರಲ್ಲಿ ಕಸವಿದ್ದರೆ ಪೊರಕೆ ಹಿಡಿದು ಗುಡಿಸುತ್ತಾರೆ.
ಕೂಡ್ಲಿಗಿ: ಮನೆ ಮನೆಗೆ ಶಾಸಕರು, ಮನೆಬಾಗಿಲಿಗೆ ನೇರ ಸರ್ಕಾರ ಎನ್ನುವ ಶೀರ್ಷಿಕೆಯಡಿ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಪ್ರತಿವಾರ ಒಂದೊಂದು ಗ್ರಾಪಂ ಆಯ್ಕೆಮಾಡಿಕೊಂಡು ಡಾ.ಎನ್.ಟಿ.ಶ್ರೀನಿವಾಸ್ ತಾವೇ ಕೆಲಸಕ್ಕೆ ಇಳಿದಿದ್ದಾರೆ.
ಶಾಲೆ, ಊರಲ್ಲಿ ಕಸವಿದ್ದರೆ ಪೊರಕೆ ಹಿಡಿದು ಗುಡಿಸುತ್ತಾರೆ. ಹುಲ್ಲು ಇದ್ದರೆ ಕುಡುಗೋಲು ತೆಗೆದುಕೊಂಡು ಕೊಯ್ಯುತ್ತಾರೆ. ಚಲಕೆಯಲ್ಲಿ ಕಸ ತುಂಬಿ ತಾವೇ ಗುಡ್ಡೆ ಹಾಕುತ್ತಾರೆ. ಶಾಸಕರು ನಮ್ಮೂರಿನಲ್ಲಿ ಕಸ ಗುಡಿಸುತ್ತಾರಲ್ಲಾ ಎಂದು ಊರವರ ಬಾಯಿಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಬಿಳಿ ಬಟ್ಟೆ ಹಾಕಿಕೊಂಡು ಶಾಸಕರ ಜೊತೆಗೆ ಬಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ತಾವು ಸಹ ಶಾಸಕರ ಕಾರ್ಯಕ್ಕೆ ಕೈ ಜೋಡಿಸುತ್ತಾರೆ. ಈ ದೖಶ್ಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಎಲ್ಲೆಡೆ ಕಂಡು ಬರುತ್ತಿದೆ.ಸ್ವಚ್ಛತೆಯಷ್ಟೇ ಅಲ್ಲ ಆರೋಗ್ಯ, ಅಭಿವೃದ್ಧಿಗೂ ಮುನ್ನುಡಿ:
ಶಾಸಕರು ಕೇವಲ ತೋರಿಕೆಗೆ ಕಸಗುಡಿಸಿ, ಹುಲ್ಲು ಕೊಯ್ದು ಸ್ವಚ್ಛ ಮಾಡುವುದಷ್ಟೇ ಅಲ್ಲ ಆ ಊರಿನ ಜನರಿಂದ ಸಮಸ್ಯೆಗಳನ್ನು ಆಲಿಸುತ್ತಾರೆ. ಸ್ಥಳದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇರುತ್ತಾರೆ. ಕೆಲವು ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸುತ್ತಾರೆ. ಇನ್ನು ಕೆಲವು ಸಂಬಂಧಿಸಿದ ಅಧಿಕಾರಿಗಳಿಗೆ ಫಾಲೋ ಮಾಡಲು ಹೇಳುತ್ತಾರೆ. ತಾವು ನೋಟ್ ಮಾಡಿಕೊಳ್ಳುತ್ತಾರೆ. ಇಲ್ಲಿಯ ಶಾಸಕರು ವೈದ್ಯರಾಗಿರುವುದರಿಂದ ಬಿಪಿ, ಶುಗರ್ ಸೇರಿದಂತೆ ಹಲವು ರೋಗಗಳಿಗೆ ತಪಾಸಣೆ ಮಾಡುತ್ತಾರೆ. ಕಣ್ಣಿನ ಸಮಸ್ಯೆಗಳನ್ನು ತಾವೇ ಸ್ಥಳದಲ್ಲಿಯೇ ತಪಾಸಣೆ ಮಾಡುತ್ತಾರೆ. ಆಪರೇಶನ್ ಮಾಡುವುದಿದ್ದರೆ ಅಲ್ಲಿಯೇ ಆಪರೇಶನ್ ದಿನಾಂಕ ನೀಡುತ್ತಾರೆ. ಹೀಗೆ ಜನತೆಗೆ ಹತ್ತಿರವಾಗುವ ಅವರ ಭಾವನೆಗಳಿಗೆ ಸ್ಪಂದಿಸುತ್ತಾರೆ. ಆಯಾ ಗ್ರಾಪಂವ್ಯಾಪ್ತಿಯಲ್ಲಿ ಮುಖ್ಯ ಸಮಸ್ಯೆಗಳಿದ್ದರೆ ಮುಂಜಾಗೃತವಾಗಿ ಅನುದಾನ ತಂದು ಅಲ್ಲಿಯೇ ಕಾಮಗಾರಿಗಳ ಭೂಮಿಪೂಜೆ ಮಾಡುತ್ತಾರೆ. ಹೀಗೆ ಇಲ್ಲಿವರೆಗೂ ₹1 ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಯ ಪರ್ವ ನಡೆಸಿದ್ದಾರೆ.ನಾನು ಯುವಕ. ಯಾವುದೇ ಬಿಂಕ-ಬಿಗುಮಾನ ಇಲ್ಲ. ಮುಖ್ಯಮಂತ್ರಿ, ಸಚಿವರ ಮನೆ, ವಿಧಾನಸೌಧಕ್ಕೆ ಹೋಗಿ ಕ್ಷೇತ್ರಕ್ಕೆ ಬೇಕಾಗುವ ಕಾಮಗಾರಿಗಳನ್ನು ಮುಂಜೂರು ಮಾಡಿಸಿಕೊಂಡು ಬರುತ್ತೇನೆ. ಗೆದ್ದ ಮೇಲೆ ಬೆಂಗಳೂರು ಸೇರುವ ಬದಲು ಹುಟ್ಟೂರಿನಲ್ಲಿದ್ದು, ಸ್ಥಳೀಯರ ಜತೆ ಇರುವೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.
ಕ್ಷೇತ್ರದ ಹಳ್ಳಿಹಳ್ಳಿಗೆ ಶಾಸಕರು ತೆರಳಿ ಜನತೆಯ ಸಮಸ್ಯೆ ಆಲಿಸಿ, ಪರಿಹಾರ ನೀಡುತ್ತಿದ್ದಾರೆ. ಊರು ಸ್ವಚ್ಛ ಮಾಡುವ ಮೂಲಕ ನಮ್ಮ ಹಳ್ಳಿಯನ್ನು ನಾವು ಸ್ವಚ್ಛ ಮಾಡಿಕೊಳ್ಳುವಂತೆ ನಮಗೆ ಅರಿವು ಮೂಡಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎನ್ನುತ್ತಾರೆ ಸುಟ್ಟಕರ್ನಾರಹಟ್ಟಿ ನಿವಾಸಿ ಬೋರಣ್ಣ.