ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ 3 ಆ್ಯಂಬುಲೆನ್ಸ್‌ (108 ವಾಹನ) ಒದಗಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಪತ್ರ ಬರೆದಿದ್ದಾರೆ.

ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ ಇರುವ ಆ್ಯಂಬುಲೆನ್ಸ್‌ಗಳು ಕೆಟ್ಟಿದ್ದು, ರಸ್ತೆ ಅಪಘಾತ, ಹೃದಯ ಸಂಬಂಧಿ ಕಾಯಿಲೆ, ಹಾವು ಕಡಿತ, ಮಹಿಳೆಯರ ಹೆರಿಗೆ, ಮಕ್ಕಳು ಹಾಗೂ ವೃದ್ಧರಿಗೆ ತುರ್ತು ಸೇವೆಗೆ ಅನನುಕೂಲವಾಗುತ್ತಿದೆ ಎಂದು ಸಚಿವರ ಗಮನ ಸೆಳೆದಿದ್ದಾರೆ.

ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಗೆ 2 ಹಾಗೂ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ 1 ಆ್ಯಂಬುಲೆನ್ಸ್‌ ತುರ್ತಾಗಿ ಒದಗಿಸಬೇಕು ಮನವಿ ಮಾಡಿದ್ದಾರೆ.

ಇತ್ತೀಚಗೆ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲು 108 ಆ್ಯಂಬುಲೆನ್ಸ್‌ ಕರೆ ಮಾಡಿದರೂ ಬಾರದ್ದಕ್ಕೆ ಸಾರ್ವಜನಿಕರು ದೂರಿದ್ದರು.


ಸಾರ್ವಜನಿಕರ ದೂರಿನ ಜೊತೆಗೆ ಫೆ.12ರಂದು ‘ಕನ್ನಡಪ್ರಭ’ 4ರಲ್ಲಿ 3 ಆ್ಯಂಬುಲೆನ್ಸ್‌ ರಿಪೇರಿ: ತುರ್ತು ಸೇವೆಗೆ ಪಡಿಪಾಟಲು ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು.