ಸಾರಾಂಶ
ತಾಲೂಕಿನ ಶಿವಪುರ ಕಲ್ಕಟ್ಟೆ ಕೆರೆ, ವಿಜಯಪುರ ಅಮಾನಿಕೆರೆಗೆ ನೀರು ತುಂಬಿಸಬೇಕು ಎಂದು ಕೆರೆ ಅಚ್ಚುಕಟ್ಟೆ ಪ್ರದೇಶದ ರೈತರು ನಡೆಸುತ್ತಿರುವ ಅಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಡಳಿತ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಶಿವಪುರ ರಸ್ತೆತಡೆದು ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ: ತಾಲೂಕಿನ ಶಿವಪುರ ಕಲ್ಕಟ್ಟೆ ಕೆರೆ, ವಿಜಯಪುರ ಅಮಾನಿಕೆರೆಗೆ ನೀರು ತುಂಬಿಸಬೇಕು ಎಂದು ಕೆರೆ ಅಚ್ಚುಕಟ್ಟೆ ಪ್ರದೇಶದ ರೈತರು ನಡೆಸುತ್ತಿರುವ ಅಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಡಳಿತ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನಾಕಾರರು ಶಿವಪುರ ರಸ್ತೆತಡೆದು ಪ್ರತಿಭಟನೆ ನಡೆಸಿದರು.
ಕಳೆದ ಮೂರು ದಿನಗಳಿಂದ ಕಲ್ಕಟ್ಟೆ ಕೆರೆಯಂಗಳದಲ್ಲಿ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಧರಣಿ ಸ್ಥಳದಿಂದ ಶಿವಪುರ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿ ದಿಕ್ಕಾರದ ಘೋಷಣೆಗಳನ್ನು ರೈತರು ಮೊಳಗಿಸಿದರು.ಶಾಸಕ, ಎಡಿಸಿ ಭೇಟಿ:
ಬುಧವಾರ ಸಂಜೆ ಧರಣಿ ಸ್ಥಳಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಭೇಟಿ ನೀಡಿ ರೈತರಿಗೆ ಕೆರಹಳ್ಳಿ ಪಂಪ್ ಹೌಸ್ ಮೋಟರ್ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಆದರೂ ರೈತರು ಮೋಟರ್ ದುರಸ್ತಿ ಪಡಿಸದೆ ಇದ್ದದ್ದು ಅಧಿಕಾರಿಗಳ ನಿರ್ಲಕ್ಷ್ಯವಾಗಿದೆ. ಬೆಳೆ ಒಣಗುತ್ತಿವೆ ಕೆರೆಗೆ ನೀರು ತುಂಬಿಸಲು ಮೀನಾ ಮೇಷ ಏಕೆ ಎಂದು ಶಾಸಕರನ್ನು ರೈತರು ಪ್ರಶ್ನಿಸಿದರು.ಮುಂದಿನ ತಿಂಗಳಲ್ಲಿ ಖಂಡಿತ ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ಧರಣಿ ಕೈ ಬಿಡಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೈತರಲ್ಲಿ ಮನವಿ ಮಾಡಿದಾಗ ರೈತರು ತಾತ್ಕಾಲಿಕವಾಗಿ ಧರಣಿ ಹಿಂಪಡೆದಿದ್ದಾರೆ ಎಂದು ಪ್ರತಿಭಟನಾ ನಿರತ ಅಭಿಷೇಕ್ ಗುಡಿಮನೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ನಾಗಾರ್ಜುನ್,ಸಿ.ಎಂ.ನಾಗರಾಜು,ಅಭಿಷೇಕ್ ಗುಡಿಮನೆ,ಶಿವಪ್ರಸಾದ್ ಸೇರಿದಂತೆ ಹಲವರಿದ್ದರು.