ಶಿವಗಂಗೆಗೆ ರೋಪ್‌ ವೇ ನಿರ್ಮಿಸಲು ಶಾಸಕರ ಮನವಿ

| Published : Aug 25 2025, 01:00 AM IST

ಶಿವಗಂಗೆಗೆ ರೋಪ್‌ ವೇ ನಿರ್ಮಿಸಲು ಶಾಸಕರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಎನ್.ಶ್ರೀನಿವಾಸ್ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದಿದ್ದು, ಅಭಿವೃದ್ಧಿಗೆ ಸಹಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಾಬಸ್‍ಪೇಟೆ: ನೆಲಮಂಗಲ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಎನ್.ಶ್ರೀನಿವಾಸ್ ಮುಂಗಾರು ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದಿದ್ದು, ಅಭಿವೃದ್ಧಿಗೆ ಸಹಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಕ್ಷಿಣಕಾಶಿ ಶಿವಗಂಗೆ ಸೇರಿದಂತೆ ಹಳೆನಿಜಗಲ್ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಪಶು ಆಸ್ಪತ್ರೆ, ಸೋಲೂರಿನಲ್ಲಿ ಪೊಲೀಸ್ ನಿಲ್ದಾಣ, ಕೆರೆಗಳ ಅಭಿವೃದ್ಧಿ, ಪಾರ್ಕ್‍ಗಳ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪಿಸುವ ಬಗ್ಗೆ ಅಧಿವೇಶನದಲ್ಲಿ ಮನವಿ ಮಾಡಿ ಬೆಳಕು ಚೆಲ್ಲಿದ್ದಾರೆ.

ಶಿವಗಂಗೆ ಬೆಟ್ಟಕ್ಕೆ ರೋಪ್ ವೇ :

ಕರ್ನಾಟಕದ ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ಶಿವಗಂಗೆ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೂ ಅಭಿವೃದ್ಧಿಯಯಲ್ಲಿ ಬಹಳ ಹಿಂದುಳಿದಿದೆ. ಶಿವಗಂಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಳಪಟ್ಟಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಿದ್ದು ಬೆಟ್ಟ ಹತ್ತಲು ಕಷ್ಟವಾಗುತ್ತಿದೆ. ಹಾಗಾಗಿ ಪ್ರವಾಸೋದ್ಯಮ ಕ್ಷೇತ್ರದಿಂದ ರೋಪ್ ವೇ ಮಾಡಬೇಕೆಂದು ಪ್ರವಾಸೋದ್ಯಮ ಸಚಿವರ ಗಮನಕ್ಕೆ ತಂದಿದ್ದಾರೆ.

ಪಶು ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯ: ನನ್ನ ತಾಲೂಕಿನಲ್ಲಿ ರೈತರು ಹೆಚ್ಚಾಗಿದ್ದು, ಜಾನುವಾರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ ಈ ನಿಟ್ಟಿನಲ್ಲಿ ಸೋಂಪುರ ಹೋಬಳಿಯ ಹಳೆನಿಜಗಲ್ ಹಾಗೂ ತ್ಯಾಮಗೊಂಡ್ಲು ಹೋಬಳಿಯ ಓಬಳಾಪುರ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಿಸಬೇಕೆಂದು ಪಶುಸಂಗೋಪನಾ ಸಚಿವರ ಗಮನ ಸೆಳೆದರು.

ಆ ಸಂದರ್ಭದಲ್ಲಿ ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ನೆಲಮಂಗಲ ತಾಲೂಕಿನಲ್ಲಿ 20 ಪಶು ಆಸ್ಪತ್ರೆಗಳಿದ್ದರೂ ನಮ್ಮ ಶಾಸಕರು ಎರಡು ಪಶು ಆಸ್ಪತ್ರೆ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ. 5000 ಸಾವಿರ ಜಾನುವಾರುಗಳಿಗೆ ಒಂದು ಪಶು ಆಸ್ಪತ್ರೆ ಇರಬೇಕೆಂದು ನಿಯಮವಿರುವ ಕಾರಣ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದರು.

ಸೋಲೂರು ಪೊಲೀಸ್ ಠಾಣೆಗೆ ಸ್ಥಾಪನೆ :

ಬೆಳಗಾವಿ ಅಧಿವೇಶನದಲ್ಲಿ ಗೃಹಸಚಿವರ ಗಮನಕ್ಕೆ ತಂದಿದ್ದು, ಗೃಹಸಚಿವರು ಸಕಾರಾತ್ಮಕವಾಗಿ ತಿಳಿಸಿದ್ದರೂ ಶೀಘ್ರವಾಗಿ ಪೊಲೀಸ್ ಠಾಣೆ ಸ್ಥಾಪಿಸಲು ಕ್ರಮ ವಹಿಸುವಂತೆ ಗೃಹ ಸಚಿವರನ್ನು ಮನವಿ ಮಾಡಿದ್ದಾರೆ.

ಕೆರೆ, ಪಾರ್ಕ್‍ಗಳ ಅಭಿವೃದ್ಧಿ : ನೆಲಮಂಗಲ ಹಾಗೂ ಬಿನ್ನಮಂಗಲ ಕೆರೆಗಳು ಕಲುಷಿತಗೊಳ್ಳುತ್ತಿದ್ದು, ಅವುಗಳ ಅಭಿವೃದ್ಧಿಗೆ ಆದಷ್ಟು ಶೀಘ್ರವಾಗಿ ಅನುದಾನ ನೀಡಬೇಕು. ನಗರಸಭೆ ಪಾರ್ಕ್‍ಗಳ ಅಭಿವೃದ್ಧಿಗೆ ಅನುದಾನದ ಕೊರತೆಯಿದ್ದು, ನಗರಾಭಿವೃದ್ದಿ ಸಚಿವರು ಗಮನಹರಿಸಿ ಪಾರ್ಕ್‍ಗಳ ಅಭಿವೃದ್ಧಿಗೆ ಅನುದಾನ ನೀಡಿ ಸಹಕಾರ ನೀಡಬೇಕು ಎಂದರು.

ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಭಿವೃದ್ದಿ ಕೇಂದ್ರ :

ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಬಹುಪಾಲು ಕೈಗಾರಿಕಾ ಪ್ರದೇಶವಿದ್ದು, ಲಕ್ಷಾಂತರ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಕಳೆದ ಅಧಿವೇಶನದಲ್ಲಿ ನೆಲಮಂಗಲದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದು ಆದಷ್ಟು ಬೇಗ ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಪೋಟೋ 1 :

ನೆಲಮಂಗಲ ಕ್ಷೇತ್ರದ ಸಮಸ್ಯೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಎನ್.ಶ್ರೀನಿವಾಸ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದರು.