ಆಸ್ಪತ್ರೆ ಕಟ್ಟಡದ ಅನುದಾನ ಕಡಿತಕ್ಕೆ ಶಾಸಕರು ಉತ್ತರಿಸಲಿ: ಹೆಗಡೆ

| Published : Sep 22 2025, 01:02 AM IST

ಸಾರಾಂಶ

ಇಂದಿನ ಸರ್ಕಾರ ₹5.20 ಕೋಟಿಗೆ ಇಳಿಕೆ ಮಾಡಿದೆ. ಇದರ ಕುರಿತು ಶಾಸಕರು ಸ್ಪಷ್ಟನೆ ನೀಡುತ್ತಿಲ್ಲ.

ಶಿರಸಿ: ಪಂಡಿತ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಕಾಮಗಾರಿ ಶೇ.80 ಮುಕ್ತಾಯಗೊಂಡಿದೆ. ಯಂತ್ರೋಪಕರಣ, ಪೀಠೋಪಕರಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ₹30 ಕೋಟಿ ಮೀಸಲಿಡಲಾಗಿತ್ತು. ಅದನ್ನು ಇಂದಿನ ಸರ್ಕಾರ ₹5.20 ಕೋಟಿಗೆ ಇಳಿಕೆ ಮಾಡಿದೆ. ಇದರ ಕುರಿತು ಶಾಸಕರು ಸ್ಪಷ್ಟನೆ ನೀಡುತ್ತಿಲ್ಲ. ಒಂದು ತಿಂಗಳಿನೊಳಗಡೆ ವೈದ್ಯರ ನೇಮಕಾತಿ ಪ್ರಕ್ರಿಯೆ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ಟೆಂಡರ್‌ ಕರೆಯದಿದ್ದರೆ ಪ್ರತಿ ಗ್ರಾಪಂ ಮಟ್ಟದಲ್ಲಿ “ಆಸ್ಪತ್ರೆ ಹೋರಾಟ ಸಮಿತಿ” ರಚಿಸಿ ಜನಜಾಗೃತಿ ಮೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.ಅವರು ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿಗೆ ಕೊಡುಗೆಯಾಗಿ ನೀಡಿದ ಆಸ್ಪತ್ರೆ ಪ್ರಾರಂಭವಾದರೆ ಬಿಜೆಪಿ ಸರ್ಕಾರಕ್ಕೆ ಆಸ್ಪತ್ರೆ ನಿರ್ಮಾಣದ ಕ್ರೆಡಿಟ್ ಸಿಗುತ್ತದೆ ಎಂಬ ಭ್ರಮೆಯಿಂದ ಹಾಲಿ ಶಾಸಕರು ಸರ್ಕಾರ ಆಸ್ಪತ್ರೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಕ ವಿಭಾಗಕ್ಕೆ 78 ಬಸ್‌ ಬಂದಿತ್ತು. ಅದರಲ್ಲಿ ಶಿರಸಿ ಘಟಕಕ್ಕೆ 28 ಬಸ್ಸು ನೀಡಲಾಗಿತ್ತು. ಆದರೆ ಶಾಸಕರು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ಬಸ್ ಖರೀದಿ ಮಾಡಿಲ್ಲ. ಶಿರಸಿ ಘಟಕದಲ್ಲಿ 79 ಬಸ್ಸುಗಳು 10 ಲಕ್ಷ ಕಿ.ಮೀ. ಮೇಲ್ಪಟ್ಟು ಓಡಿಸದ ಬಸ್ಸು ಇದೆ ಎಂಬ ಹೇಳಿಕೆ ನೀಡಿದ್ದರು. ಜವಾಬ್ದಾರಿಯುತ ಶಾಸಕರಾಗಿ ಸುಳ್ಳು ಹೇಳುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಜನ ಸ್ಪಂದನ ಅಥವಾ ಜನತಾ ದರ್ಶನ ಕಾರ್ಯಕ್ರಮ ಪ್ರತಿ ತಿಂಗಳ ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ಏಕೆ ಮಾಡುತ್ತಿಲ್ಲ? ತಾವು ಪ್ರತೀ ತಿಂಗಳ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದರೆ ಜನರಿಗೆ ಶಾಸಕರು ಹತ್ತಿರ ಸಿಗುವುದರಿಂದ ಕೆಲಸ ಆಗುತ್ತದೆ. ಹೋರಾಟದ ಮೂಲಕ ಜನರಿಗೆ ಈ ವಿಷಯ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಯಶೀಲ ಗೌಡರ, ಗ್ರಾಪಂ ಸದಸ್ಯ ನಾರಾಯಣ ಹೆಗಡೆ, ಶಿವಾನಂದ ದೇಶಳ್ಳಿ ಇದ್ದರು.