ಸಾರಾಂಶ
ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್ ಈ ರೀತಿ ಅಮಾನತು ಮಾಡಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ: ಯಾರದೋ ಮಾತು ಕೇಳಿ ಸ್ಪೀಕರ್ ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚೋದನೆಯಿಂದಲೇ ಇದು ನಡೆದಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು. ಕೂಡಲೇ ಅಮಾನತು ಹಿಂಪಡೆಯಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು. ಅಶಿಸ್ತು ಪ್ರದರ್ಶಿಸಿದಾಗ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದರೆ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್ ಈ ರೀತಿ ಅಮಾನತು ಮಾಡಿರುವುದು ಸರಿಯಲ್ಲ. ಸ್ಪೀಕರ್ ತಮ್ಮ ಕಚೇರಿಗೆ ಕರೆಯಿಸಿ ಬುದ್ಧಿ ಹೇಳಿ ಎಚ್ಚರಿಕೆ ಕೊಡಬಹುದಿತ್ತು ಅಥವಾ ಒಂದು ದಿನದ ಮಟ್ಟಿಗೆ ಅಮಾನತು ಮಾಡಬಹುದಿತ್ತು. ಆರು ತಿಂಗಳು ಅಮಾನತು ಮಾಡಿರುವುದು ಅತ್ಯಂತ ಖಂಡನೀಯ ಎಂದರು.ಈ ರೀತಿಯ ಘಟನೆ ಹಿಂದೆ ನಡೆದಿರಲಿಲ್ಲ. ಸಿದ್ದರಾಮಯ್ಯ ಈ ಹಿಂದೆ ಸದನದ ಬಾಗಿಲನ್ನೇ ಒದ್ದಿದ್ದರು. ದೊಡ್ಡ ರೀತಿಯ ಗೂಂಡಾಗಿರಿ ಮಾಡಿದ್ದರು. ಆಗ ಅವರನ್ನು ಅಮಾನತು ಮಾಡಲಾಗಿತ್ತೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕರು ಮೆದುವಾಗಿ ಪ್ರತಿಭಟನೆ ನಡೆಸಿದ್ದಾರೆ. ಪೇಪರ್ ಹರಿದು ಹಾಕುವುದು ಕಾಮನ್ ಆಗಿಬಿಟ್ಟಿದೆ ಎಂದ ಅವರು, ಯಾರದೋ ಮಾತು ಕೇಳಿ ಆರು ತಿಂಗಳು ಅಮಾನತು ಮಾಡಲಾಗಿದೆ. ಸ್ವಯಂಪ್ರೇರಣೆಯಿಂದ ಅಮಾನತು ರದ್ದು ಮಾಡಬೇಕು. ಸ್ಪೀಕರ್ ನಡವಳಿಕೆ ಸರಿಯಲ್ಲ. ಯಾವುದೇ ಮೀಟಿಂಗ್‌ಗೂ ಹಾಜರಾಗಬಾರದೆಂದರೆ ಹೇಗೆ? ಇದು ಶಾಸಕರ ಹಕ್ಕುಗಳನ್ನು ಕಿತ್ತುಕೊಂಡಂತೆ. ಸ್ಪೀಕರ್ ಸಂವಿಧಾನಬಾಹಿರ ನಡೆ ಅನುಸರಿಸಿದ್ದಾರೆ. ಕೂಡಲೇ ಅಮಾನತು ವಾಪಸ್ ಪಡೆಯಬೇಕು. ಸಿಎಂ ಅವರ ಪ್ರಚೋದನೆಯಿಂದಲೇ ಇದೆಲ್ಲ ನಡೆದಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಇದನ್ನು ಹಿಂದೆ ಪಡೆಯುವಂತೆ ನೋಡಿಕೊಳ್ಳಬೇಕು. ಇದು ಪೂರ್ವನಿಯೋಜಿತ ಎನ್ನುವುದು ಗೊತ್ತಿಲ್ಲ. ಸ್ಪೀಕರ್ ಅವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.