ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ಶಾಸಕರಿಗೆ ಒತ್ತಾಯ

| Published : Aug 06 2024, 12:38 AM IST

ಸಾರಾಂಶ

ಹಳ್ಯಾಳ ಗ್ರಾಮದಲ್ಲಿ ಗುಂಡಿಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ರಸ್ತೆ ಮೇಲೆ ಗುಂಡಿಗಳು ಇವೆಯೋ? ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ? ಎಂದು ವಾಹನ ಸವಾರರು ಕಂಗಾಲಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಶಾಸಕರು ಎದುರು ಅಳಲು ತೋಡಿಕೊಂಡರು.

ಹುಬ್ಬಳ್ಳಿ:

ತಾಲೂಕಿನ ಹಳ್ಯಾಳ ಗ್ರಾಮದ ವರ್ತುಲ, ಕಡಪಟ್ಟಿ ಅಲ್ಲಾಪುರಕ್ಕೆ ಹಾಗೂ ಅದರಗುಂಚಿಗೆ ಹಾದು ಹೋಗುವ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣ ಹಾಳಾಗಿವೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಲು ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ವಿಮೋಚನಾ ಸಮಿತಿ ಕಾರ್ಯಕರ್ತರು ಶಾಲಾ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಸವಾಯಿ ಗಂಧರ್ವ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಸ್ತೆಯಿಂದಾಗಿರುವ ತೊಂದರೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಗುಂಡಿಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ರಸ್ತೆ ಮೇಲೆ ಗುಂಡಿಗಳು ಇವೆಯೋ? ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ? ಎಂದು ವಾಹನ ಸವಾರರು ಕಂಗಾಲಾಗುತ್ತಿದ್ದಾರೆ, ಮಳೆಗಾಲದಲ್ಲಿ ಗ್ರಾಮದ ಸುತ್ತಲೂ ಇರುವ ಪಿಡಬ್ಲ್ಯೂಡಿ ರಸ್ತೆಗಳು ಅದರಗುಂಚಿಗೆ ಹೋಗುವ ರಸ್ತೆ, ಕಡಪಟ್ಟಿ ಅಲ್ಲಾಪುರಕ್ಕೆ ಹೋಗುವ ರಸ್ತೆ ಮತ್ತು ಹುಬ್ಬಳ್ಳಿಗೆ ಹೋಗುವ ರಸ್ತೆಗಳಲ್ಲಿ ಬೃಹತ್‌ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಈ ಕುರಿತು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಈ ವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಗಳಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದ್ದು ತಗ್ಗು, ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಆತಂಕ ಎದುರಾಗಿದೆ. ಆದಷ್ಟೂ ಶೀಘ್ರವೇ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎನ್‌.ಎಚ್‌. ಕೋನರಡ್ಡಿ, ಮಳೆಯಿಂದಾಗಿ ಎಲ್ಲೆಡೆ ಇದೇ ಸಮಸ್ಯೆ ಉದ್ಭವವಾಗಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗನೆ ರಸ್ತೆ ದುರಸ್ತಿಗೊಳಿಸುವ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳಿಗೆ ತಾಕೀತು ಮಾಡುವುದಾಗಿ ಭರವಸೆ ನೀಡದರು.

ಈ ವೇಳೆ ಸಂಘಟನೆಯ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.