ಪರಿಷತ್‌ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಬಂಡಾಯ ಬಿಸಿ

| Published : May 28 2024, 01:00 AM IST

ಸಾರಾಂಶ

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು, ದಾವಣಗೆರೆ (ಮೂರು ಕ್ಷೇತ್ರ) ಜಿಲ್ಲೆಗಳ ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಶಿವಮೊಗ್ಗದ ಡಾ.ಧನಂಜಯ ಸರ್ಜಿ, ಕಾಂಗ್ರೆಸ್‌ನಿಂದ ಶಿವಮೊಗ್ಗದ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮತ್ತು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದ ಎಸ್‌.ಪಿ. ದಿನೇಶ್‌ ಸ್ಪರ್ಧಿಸಿದ್ದಾರೆ.

ಗೋಪಾಲ್‌ ಯಡಗೆರೆಕನ್ನಡಪ್ರಭ ವಾರ್ತೆ

ಶಿವಮೊಗ್ಗಲೋಕಸಭಾ ಚುನಾವಣೆಯ ಬೆನ್ನಲ್ಲೇ ನೈಋತ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಒರೆ ಹಚ್ಚಲು ಮುಂದಾಗಿದೆ. ಎರಡೂ ಪಕ್ಷಗಳಿಗೆ ಬಂಡಾಯದ ಬಿಸಿಯೇ ದೊಡ್ಡ ತಲೆಬಿಸಿಯಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು, ದಾವಣಗೆರೆ (ಮೂರು ಕ್ಷೇತ್ರ) ಜಿಲ್ಲೆಗಳ ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಶಿವಮೊಗ್ಗದ ಡಾ.ಧನಂಜಯ ಸರ್ಜಿ, ಕಾಂಗ್ರೆಸ್‌ನಿಂದ ಶಿವಮೊಗ್ಗದ ಆಯನೂರು ಮಂಜುನಾಥ್ ಸ್ಪರ್ಧಿಸಿದ್ದರೆ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮತ್ತು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಶಿವಮೊಗ್ಗದ ಎಸ್‌.ಪಿ. ದಿನೇಶ್‌ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿ ಇತರೆ ಪಕ್ಷೇತರರೂ ಸೇರಿ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಶೇಷವೆಂದರೆ ಐದು ಜಿಲ್ಲೆಗಳ ಪೈಕಿ ಪ್ರಮುಖ ಅಭ್ಯರ್ಥಿಗಳಾದ ನಾಲ್ವರಲ್ಲಿ ಮೂವರು ಶಿವಮೊಗ್ಗದವರೇ ಎನ್ನುವುದು ವಿಶೇಷ.

ನೈಋತ್ಯ ಪದವೀಧರ ಕ್ಷೇತ್ರ ಆರಂಭದಿಂದಲೂ ಈ ಕ್ಷೇತ್ರ ಬಿಜೆಪಿ ಕೈಯಲ್ಲಿಯೇ ಇದೆ. ವಿಧಾನಪರಿಷತ್‌ ಸಭಾಪತಿ, ಸಚಿವರಾಗಿ ಕಾರ್ಯ ನಿರ್ವಹಿಸಿದ ಹಿರಿಯ ಬಿಜೆಪಿ ಮುಖಂಡ ಡಿ.ಎಚ್‌.ಶಂಕರಮೂರ್ತಿ ಈ ಕ್ಷೇತ್ರ ತಮ್ಮ ಕೈಯಲ್ಲಿ ಇರಿಸಿಕೊಂಡಿದ್ದರು. 2018ರಲ್ಲಿ ಶಂಕರಮೂರ್ತಿ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಈ ಕ್ಷೇತ್ರದ ಟಿಕೆಟ್ ಆಯನೂರು ಮಂಜುನಾಥ್‌ರಿಗೆ ನೀಡಿ ಗೆಲ್ಲಿಸಲಾಯಿತು.

ಕಾಂಗ್ರೆಸ್‌ ವಿರುದ್ಧ ದಿನೇಶ್ ಸಡ್ಡು:

ಬಿಜೆಪಿ ಕ್ಷೇತ್ರ ಎಂದೇ ಪರಿಗಣಿತವಾದ ಈ ಕ್ಷೇತ್ರವನ್ನು ಹೇಗಾದರೂ ತನ್ನ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಕಳೆದ ಎರಡು ಚುನಾವಣೆಯಲ್ಲಿ ತೀವ್ರ ಪ್ರಯತ್ನ ನಡೆಸಿತ್ತು. ಎಸ್‌.ಪಿ.ದಿನೇಶ್‌ ಕಾಂಗ್ರೆಸ್ ಟಿಕೆಟ್‌ ಪಡೆದು ಇನ್ನಿಲ್ಲದ ಪ್ರಯತ್ನ ನಡೆಸಿ ಗಮನಾರ್ಹ ಎಂಬ ಸಂಖ್ಯೆಯ ಮತ ಕೂಡ ಪಡೆದಿದ್ದರು. ಈ ಬಾರಿ ಹೇಗಾದರೂ ಗೆಲ್ಲುತ್ತೇನೆ ಎಂಬ ನಿರೀಕ್ಷೆಯಲ್ಲಿದ್ದ ದಿನೇಶ್‌ಗೆ ಶಾಕ್‌ ಕಾದಿತ್ತು. ಬಿಜೆಪಿ ತೊರೆದು ಜೆಡಿಎಸ್‌ ಸೇರಿ, ಬಳಿಕ ಅಲ್ಲಿಂದಲೂ ಹೊರ ಬಂದು ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌ರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಶೇಷ ಆಸಕ್ತಿ ಫಲವಾಗಿ ಟಿಕೆಟ್‌ ದೊರಕಿತು. ಇದು ದಿನೇಶ್‌ರನ್ನು ಕೆರಳಿಸಿದ್ದಲ್ಲದೆ, ತಮ್ಮ ಅತಿ ದೀರ್ಘ ಕಾಲದ ಕಾಂಗ್ರೆಸ್‌ ಪಕ್ಷದ ಸೇವೆ ಪರಿಗಣಿಸದ ಕಾಂಗ್ರೆಸ್‌ ನಾಯಕರ ವಿರುದ್ಧ ಸಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಕೆರಳಿದ ರಘುಪತಿ ಭಟ್‌:

ಇತ್ತ ಬಿಜೆಪಿಯಲ್ಲಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್‌ಗೂ ಇದೇ ಶಾಕ್‌ ಆಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನಿರಾಕರಿಸಿದಾಗ ತಾಳ್ಮೆಯಿಂದ ಸುಮ್ಮನಿದ್ದರು. ಪರಿಷತ್‌ ಟಿಕೆಟ್‌ ನೀಡುವುದಾಗಿ ಹೇಳಿದ್ದ ಪಕ್ಷದ ವರಿಷ್ಠರ ಮಾತನ್ನು ನಂಬಿದ್ದರು. ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಟಿಕೆಟ್‌ ಮಾತ್ರ ಯಡಿಯೂರಪ್ಪ ಕುಟುಂಬದ ಆಪ್ತರಾದ ಡಾ. ಧನಂಜಯ ಸರ್ಜಿಗೆ ಸಿಕ್ಕಾಗ ಸಹಜವಾಗಿಯೇ ಕೆರಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

ರಾಷ್ಟ್ರಭಕ್ತ ಬಳಗದ ಬೆಂಬಲ:

ರಘುಪತಿ ಭಟ್‌ ಬಂಡಾಯ ಘೋಷಿಸುತ್ತಿದ್ದಂತೆ ಬಿಜೆಪಿಯ ಮಾಜಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗವು ರಘುಪತಿ ಭಟ್‌ರಿಗೆ ಬೆಂಬಲ ಘೋಷಿಸಿದೆ. ಶಿವಮೊಗ್ಗ ಜಿಲ್ಲಾದ್ಯಂತ ಪ್ರಚಾರ ಕಾರ್ಯದಲ್ಲಿಯೂ ನಿರತವಾಗಿದೆ. ಉಳಿದ ಕಡೆ ರಘುಪತಿ ಭಟ್‌ ಪ್ರಚಾರ ನಡೆಸುತ್ತಿದ್ದಾರೆ.

ಜಾತಿ ಲೆಕ್ಕಾಚಾರ:

ಎಲ್ಲ ಚುನಾವಣೆಯಂತೆ ಪಕ್ಷದ ಜೊತೆಗೆ ಇಲ್ಲಿಯೂ ಜಾತಿ ಲೆಕ್ಕಾಚಾರ ಕೂಡ ನಡೆಯಲಿದೆ. ಪ್ರಮುಖ ನಾಲ್ಕು ಮಂದಿ ಅಭ್ಯರ್ಥಿಗಳ ಪೈಕಿ ಮೂವರು ಲಿಂಗಾಯತರು ಮತ್ತು ಒಬ್ಬರು ಬ್ರಾಹ್ಮಣ ಎನ್ನುವುದು ಗಮನಿಸಬೇಕಾದ ಸಂಗತಿ. ಶಿವಮೊಗ್ಗ ಜಿಲ್ಲೆಯ ಎರಡು ಮೂರು ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ತರಿಕೆರೆ, ಚಿಕ್ಕಮಗಳೂರು ನಗರ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕುಗಳಲ್ಲಿ ಲಿಂಗಾಯಿತ ಮತಗಳು ದೊಡ್ಡ ಸಂಖ್ಯೆಯಲ್ಲಿ ಇವೆ. ಉಳಿದ ಕಡೆಗಳಲ್ಲಿ ಈ ಮತಗಳು ಇಲ್ಲ ಎನ್ನುವಷ್ಟು ಕಡಿಮೆ. ಉಳಿದ ಪಕ್ಷೇತರ ಅಭ್ಯರ್ಥಿಗಳಲ್ಲಿ ಕೆಲವರು ತಮ್ಮದೇ ಮಿತಿಯಲ್ಲಿ ಪ್ರಭಾವಿಯಾಗಿ ಮತ ಗಳಿಸುವುದರಲ್ಲಿ ಅನುಮಾನವಿಲ್ಲ. ಆದರೆ ಗೆಲುವಿನ ಅಂಚು ತಲುಪುವುದು ಸುಲಭವಲ್ಲ. ಒಟ್ಟಾರೆಯಾಗಿ ನೈಋತ್ಯ ಪದವೀಧರ ಕ್ಷೇತ್ರ ಈ ಬಾರಿ ಬಿಜೆಪಿಗೂ ಸುಲಭದ ತುತ್ತಲ್ಲ ಎಂಬಂತೆ ಭಾಸವಾಗುತ್ತಿದೆ. ದಡ ಸೇರಲು ಸಾಕಷ್ಟು ಬೆವರು ಹರಿಸಬೇಕು.ಡಾ.ಧನಂಜಯ ಸರ್ಜಿಗೆ ಬಿಜೆಪಿ ವರ್ಚಸ್ಸೇ ಆಧಾರ

ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಪಕ್ಷದ ವರ್ಚಸ್ಸನ್ನೇ ನಂಬಿಕೊಂಡಿದ್ದಾರೆ. ಜಾತಿಯ ಬೆಂಬಲವಿಲ್ಲದೆ ಡಿ.ಎಚ್‌.ಶಂಕರಮೂರ್ತಿ ಗೆದ್ದ ಈ ಕ್ಷೇತ್ರದಲ್ಲಿ ತಾವು ಜಾತಿಯನ್ನು ಮೀರಿ ಗೆಲುವು ಸಾಧಿಸುತ್ತೇನೆ ಎಂಬ ನಂಬಿಕೆ ಹೊಂದಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಮತದಾರರ ಹೆಚ್ಚು ನಂಬಿದ್ದು, ಜೊತೆಗೆ ಉಳಿದ ಜಿಲ್ಲೆಗಳ ಮತದಾರರು ತಮಗೆ ಆದ ಅನ್ಯಾಯ ಗುರುತಿಸಿ ಮತ ನೀಡಲಿದ್ದಾರೆ ಎಂದು ನಂಬಿಕೊಂಡಿದ್ದಾರೆ. ಮೂವರು ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರೇ ಆದ್ದರಿಂದ ಇವರು ಮತಗಳ ವಿಭಜಿಸಿಕೊಳ್ಳುವುದರಿಂದ ನನ್ನ ಗೆಲುವು ಇನ್ನಷ್ಟು ಸುಲಭ ಎಂಬ ಲೆಕ್ಕಾಚಾರದಲ್ಲಿದ್ದಾರೆ.

ಸಾಧನೆಯೇ ಆಯನೂರು ಬಲ:

ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌ ತಮ್ಮ ಮತ ಬ್ಯಾಂಕ್ ಎಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸುತ್ತಿಲ್ಲವಾದರೂ, ಕಳೆದ ಅವಧಿಯಲ್ಲಿ ತಮ್ಮ ಕೆಲಸ, ಶಿಕ್ಷಕರು, ಸರ್ಕಾರಿ ನೌಕರರ ಹಳೇ ಪಿಂಚಣಿ ವ್ಯವಸ್ಥೆ ಜಾರಿ, ಗುತ್ತಿಗೆ ಶಿಕ್ಷಕರ ಪರವಾಗಿ ಎತ್ತಿದ ಧ್ವನಿ ತಮಗೆ ಮತ ಕೊಡಿಸುತ್ತೆ ಎಂದು ಬಲವಾಗಿ ನಂಬಿದ್ದಾರೆ. ಇನ್ನು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಎಸ್‌.ಪಿ.ದಿನೇಶ್‌ ತಾವು ಎರಡು ಚುನಾವಣೆಗಳಲ್ಲಿ ಸಂಪಾದಿಸಿದ ಮತ್ತು ಆ ಬಳಿಕವೂ ತಾವು ನೊಂದಣಿ ಮಾಡಿಸಿದ ಮತದಾರರ ಸಂಖ್ಯೆ, ಪದವೀಧರರ ಪರವಾಗಿ ಮಾಡಿದ ಕೆಲಸಗಳು ತಮ್ಮ ಕೈಹಿಡಿಯಲಿದೆ ಎನ್ನುತ್ತಾರೆ.