ವಂದೇ ಭಾರತ ರೈಲು ಪ್ರಾರಂಭಕ್ಕೆ ವಿಪ ಸದಸ್ಯ ಸುನಿಲಗೌಡ ಪತ್ರ

| Published : Jun 23 2024, 02:05 AM IST

ಸಾರಾಂಶ

ವಿಜಯಪುರ-ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ವಿಧಾನ ಪರಿಷತ್ ಶಾಸಕ ಸುನಿಲಗೌಡ ಪಾಟೀಲ ಸಂಸದ ಪಿ. ಸಿ. ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬಾಗಲಕೋಟೆ: ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ವಿಧಾನ ಪರಿಷತ್ ಶಾಸಕ ಸುನಿಲಗೌಡ ಪಾಟೀಲ ಸಂಸದ ಪಿ. ಸಿ. ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸತತ 5ನೇ ಬಾರಿಗೆ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಅವರಿಗೆ 24.11.2023ರಂದು ಪತ್ರ ಬರೆದು ಈ ಕುರಿತು ಮನವಿ ಮಾಡಿದ್ದೆ. ಆದರೆ, ಅವರು ಸ್ಪಂದಿಸಲಿಲ್ಲ. ಆದರೂ, ಜಿಲ್ಲೆಯ ಮತದಾರರು ತಮ್ಮನ್ನು ಪುನರಾಯ್ಕೆ ಮಾಡಿದ್ದಾರೆ. ತಮ್ಮ ಪರ ಮತ ಹಾಕಿರುವ ಮತದಾರರ ಋಣ ತೀರಿಸುವ ಸಲುವಾಗಿಯಾದರೂ ಸಂಸದರು ವಂದೇ ಭಾರತ ರೈಲು ಸೇವೆ ಪ್ರಾರಂಭಿಸಲು ಶ್ರಮಿಸಬೇಕು. ಈಗಾಗಲೇ ನಮ್ಮ ನೆರೆಯ ಜಿಲ್ಲೆಗಳಾದ ಕಲಬುರಗಿ, ಬೆಳಗಾವಿ, ಧಾರವಾಡ ಸೇರಿದಂತೆ ಎಲ್ಲ ಜಿಲ್ಲೆಗಳಿಂದ ಈ ರೈಲು ಸೇವೆ ಲಭ್ಯವಿದೆ. ಆದರೆ, ಅಖಂಡ ವಿಜಯಪುರ ಜಿಲ್ಲೆಯಿಂದ ಇನ್ನೂ ವಂದೇ ಭಾರತ ರೈಲು ಪ್ರಾರಂಭವಾಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಉಭಯ ಜಿಲ್ಲೆಗಳ ಜನರಿಂದ ಸಾಕಷ್ಟು ಬೇಡಿಕೆ ಬರುತ್ತಿದ್ದರೂ ನೀವು ಕಣ್ಮುಚ್ಚಿ ಕುಳಿತಿರುವಂತಿದೆ. ಈ ರೈಲು ಸೇವೆ ಪ್ರಾರಂಭಿಸಲು ಕ್ರಮ ಕೈಗೊಂಡರೆ ಉಭಯ ಜಿಲ್ಲೆಗಳಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಈ ರೈಲು ಸೇವೆ ಪ್ರಾರಂಭವಾದ ತಕ್ಷಣ ಸಂಸದರನ್ನು ಜಿಲ್ಲೆಯ ಜನರ ಪರವಾಗಿ ನಾಗರಿಕ ಸನ್ಮಾನ ಮಾಡಲಾಗುವುದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಈ ರೈಲು ಸೇವೆ ಪ್ರಾರಂಭವಾದರೆ ಬೆಂಗಳೂರಿಗೆ ಹೋಗಿ ಬರುವವರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ವ್ಯಾಪಾರ ವಹಿವಾಟಿಗೂ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಈ ಭಾಗದಲ್ಲಿ ಆರ್ಥಿಕ ಅಭಿವೃದ್ಧಿಯೂ ಆಗಲಿದೆ. ಈಗಲಾದರೂ ತಾವು ಎಚ್ಚೆತ್ತು ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದರೆ, ತಮಗೆ ಮತಹಾಕಿರುವ ಮತದಾರರನ್ನು ಕೇವಲ ಮತಗಳಿಕೆಗಷ್ಟೇ ಸೀಮಿತಗೊಳಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಕಾರ್ಯೋನ್ಮುಖರಾಗುವಂತೆ ಮನವಿ ಮಾಡುವುದಾಗಿ ವಿಧಾನ ಪರಿಷತ ಶಾಸಕರು ಜೂನ್ 18 ರಂದು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.