ಜಿಲ್ಲೆಯಲ್ಲಿ ಗೌಡರ ಕುಟುಂಬದ ವಿರುದ್ಧ ದ್ವೇಷದ ರಾಜಕಾರಣ
KannadaprabhaNewsNetwork | Published : Oct 15 2023, 12:45 AM IST
ಜಿಲ್ಲೆಯಲ್ಲಿ ಗೌಡರ ಕುಟುಂಬದ ವಿರುದ್ಧ ದ್ವೇಷದ ರಾಜಕಾರಣ
ಸಾರಾಂಶ
ಹಾಸನ ಜಿಲ್ಲೆಯಲ್ಲಿ ಎಚ್ ಡಿ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಹಾಸನ ಜಿಲ್ಲೆಯಲ್ಲಿ ಎಚ್ ಡಿ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಸರ್ಕಾರದಿಂದ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಆರೋಪಿಸಿದ್ದಾರೆ. ಹೋಬಳಿಯ ಹುಲಿಕೆರೆ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಎಚ್ ಡಿ ದೇವೇಗೌಡರು ಹಾಗೂ ಎಚ್ ಡಿ ರೇವಣ್ಣನವರ ಕೊಡುಗೆ ಇದೆ. ಆದರೆ ಕೇವಲ ರಾಜಕೀಯ ಟೀಕೆಗಾಗಿ ತಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಕೆಲವರು ಮಾಡುತ್ತಾರೆ. ನಾವು ನಾವು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜೆಡಿಎಸ್ ಸರ್ಕಾರವಿದ್ದಾಗ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ತಂದು ಎಚ್ ಡಿ ರೇವಣ್ಣನವರು ಅಭಿವೃದ್ಧಿಪಡಿಸಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ಕೊಟ್ಟಿರುವ ಭರವಸೆಯಂತೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳಿಗೆ ಸಮರ್ಪಕವಾಗಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣವನ್ನು ಹಾಕಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಆದರೆ ಈ ಯೋಜನೆ ಫಲಾನುಭವಿಗಳಿಗೆ ಕೇವಲ ಒಂದು ತಿಂಗಳು ಮಾತ್ರ ಹಣ ಮಾತ್ರ ಬಂದಿದೆ. ಎರಡು ತಿಂಗಳು ಬಂದರು ಇನ್ನು ಹಣ ಹಾಕಲು ಸರ್ಕಾರ ತಿಣಕಾಡುತ್ತಿದೆ ಎಂದು ಟೀಕಿಸಿದರು. ಇನ್ನೂ ಉಚಿತ ಕರೆಂಟ್ ಎನ್ನುತ್ತಾರೆ ಆದರೆ ಲೋಡ್ ಶೆಡ್ಡಿಂಗ್ ನೆಪದಲ್ಲಿ ಗಂಟೆಗಟ್ಟಲೆ ಕರೆಂಟ್ ತೆಗೆಯುತ್ತಿದ್ದಾರೆ. ಇನ್ನು ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ಕರೆಂಟ್ ನೀಡುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮಾಜಿವಿಧಾನ ಪರಿಷತ್ ಸದಸ್ಯರು ಜಿಲ್ಲೆಯ ತಾಲೂಕಿನ ಅಭಿವೃದ್ಧಿಗೆ ಎಷ್ಟು ಶ್ರಮಿಸಿದ್ದಾರೆ ಎಂದು ತೋರಿಸಲಿ ಕೇವಲ ದೇವೇಗೌಡ ಕುಟುಂಬದವರನ್ನು ಟೀಕಿಸುವ ನೈತಿಕತೆ ಅವರಿಗಿಲ್ಲ ಎಂದರು. ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣರವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಶ್ರಮಿಸುತ್ತಿದ್ದು ಅವರ ಪರಿಶ್ರಮದಿಂದ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡು ಅನೇಕ ಕೆರೆಗಳಿಗೆ ನೀರು ಹರಿಸುವ ಕೆಲಸವನ್ನು ಮಾಡಿದ್ದಾರೆ ಎಂದರು. ಕೃಷಿ ಪತ್ತಿನ ನಿರ್ದೇಶಕ ಎಚ್‌ಪಿ ಸಂಪತ್ ಕುಮಾರ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಎಚ್ ಡಿ ದೇವೇಗೌಡರು ಎಚ್ ಡಿ ರೇವಣ್ಣನವರ ಪರಿಶ್ರಮದಿಂದ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಹೈನೋದ್ಯಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ತಾಲೂಕಿನ ನೀರಾವರಿ ಯೋಜನೆಗಳಿಗೆ ಶಾಸಕರ ಕೊಡುಗೆ ಅಪಾರ ಅವರ ಪರಿಶ್ರಮದಿಂದ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಮೂಲಕ ನೂರಕ್ಕೂ ಹೆಚ್ಚು ಕರೆಗಳನ್ನು ತುಂಬಿಸಲಾಗಿದೆ ಎಂದರು. ಗ್ರಾಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರನ್ನು ವಿನಾಯಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧಣಿ ಕುಮಾರ್, ಮುಖಂಡರುಗಳಾದ ಚಂದ್ರೇಗೌಡ, ಜಂಬೂರು ಮಹೇಶ್, ದಾಸರಹಳ್ಳಿ ನಾಗರಾಜ್, ರೇಣುಕಾ ರಂಗಸ್ವಾಮಿ, ಡೇರಿ ಸೆಕ್ರೆಟರಿ ಭಾಗ್ಯಮ್ಮ ವೆಂಕಟೇಶ್, ನಾಗೇಶ್, ಹುಲಿಕೆರೆ ಮಹೇಶ್, ಹೊನ್ನೇಗೌಡ, ರಾಮೇಗೌಡ, ಸೋಮೇಗೌಡ, ಪ್ರಶಾಂತ್, ಚಂದ್ರೇಗೌಡ, ತೋಪೇಗೌಡ, ದೇವರಾಜ್, ನಾಗಮಣಿ ಪ್ರಕಾಶ್, ಸೇರಿದಂತೆ ವಿನಾಯಕ ಗೆಳೆಯರ ಬಳಗದ ಸರ್ವ ಸದಸ್ಯರು ಹಾಜರಿದ್ದರು.