ಸಾರಾಂಶ
ಕುಂದಾಪುರ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕೊಡಮಾಡುವ ೨೦೨೫ರ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ೧೦,೦೦೦ ರು. ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಫೆ. 8ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ವಾರ್ಷಿಕೋತ್ಸವದಂದು ಪ್ರದಾನಿಸಲಾಗುವುದು.
ಕನ್ನಡಪ್ರಭ ವಾರ್ತೆ ಉಡುಪಿ
ಕುಂದಾಪುರ ಎಂ.ಎಂ. ಹೆಗ್ಡೆ ಪ್ರತಿಷ್ಠಾನ ಕೊಡಮಾಡುವ ೨೦೨೫ರ ಸಾಲಿನ ಎಂ.ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ೧೦,೦೦೦ ರು. ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಫೆ. 8ರಂದು ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ವಾರ್ಷಿಕೋತ್ಸವದಂದು ಪ್ರದಾನಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕುಂದಾಪುರ ತಾಲೂಕಿನ ನಾಗೂರಿನ ಕಬ್ಬಾಗಿಲು ಎಂಬಲ್ಲಿ ತಮ್ಮ ದೇವಾಡಿಗ ಮತ್ತು ಕಾವೇರಿ ದೇವಾಡಿಗ ದಂಪತಿ ಪುತ್ರನಾಗಿ ಜನಿಸಿದ ಶ್ರೀನಿವಾಸ ದೇವಾಡಿಗ, ಬಾಲ್ಯದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಂಡೆ ಮದ್ದಲೆಯ ನಾದಕ್ಕೆ ಮನಸೋತು ಅಲ್ಲಿಂದಲೇ ತಮ್ಮನ್ನು ಯಕ್ಷಗಾನದಲ್ಲಿ ತೊಡಗಿಸಿಕೊಂಡರು.ಉಡುಪಿ ಯಕ್ಷಗಾನ ಕೇಂದ್ರದಲ್ಲಿ ೧೯೮೨ರಲ್ಲಿ ಕೋಟ ಶಿವರಾಮ ಕಾರಂತರ ನೇತೃತ್ವದಲ್ಲಿ ಹೇರಂಜಾಲು ವೆಂಕಟರಮಣ ಗಾಣಿಗರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆ ಅಭ್ಯಾಸ ಮಾಡಿ, ಯಶಸ್ಸನ್ನು ಸಾಧಿಸಿ ಅಪ್ರತಿಮ ಛಲಗಾರನಾಗಿ ತಮ್ಮನ್ನು ತೊಡಗಿಸಿಕೊಂಡರು.ಪೌರಾಣಿಕ ಪ್ರಸಂಗಗಳಲ್ಲಿ ಶಲ್ಯ, ಕಮಲಭೂಪ, ಕೌಂಡ್ಲಿಕ, ಭೀಮ, ಕೌರವ, ಬಲರಾಮ ರಾವಣ, ಯಮ, ಬೊಬ್ಬರ್ಯ ಮುಂತಾದ ಮೇರು ಪಾತ್ರಗಳಲ್ಲಿ ಅಭಿನಯಿಸಿ ಪಾತ್ರಗಳಿಗೆ ಜೀವಂತಿಕೆಯನ್ನು ತುಂಬಿ ದಾಖಲೆಯನ್ನೇ ಸೃಷ್ಟಿಸಿದವರು. ಪೌರಾಣಿಕ ಪ್ರಸಂಗಗಳ ಅಧ್ಯಯನ ಹಾಗೂ ಶಾಸ್ತ್ರೀಯತೆಯನ್ನು ಕರಗತ ಮಾಡಿಕೊಂಡ ಇವರು, ನೃತ್ಯ ಶೈಲಿ, ಶುದ್ಧ ಸಾಹಿತ್ಯ, ಗಂಭೀರ ನಡೆಗಳ ಮೂಲಕ ಜನಪ್ರಿಯತೆ ಗಳಿಸಿದವರು.ಕಲೆಯನ್ನು ಅಂತಃಕರಣ ಶುದ್ಧವಾಗಿ ಆರಾಧಿಸುವ ಇವರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಪ್ರಸ್ತುತ ಇವರು ಮಾರಣಕಟ್ಟೆ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.