ಧಾರ್ಮಿಕ, ಸಾಮಾಜಿಕ, ಮತ್ತಿತರ ಬಹುಪಯೋಗಿ ಕಾರ್ಯಗಳಲ್ಲಿ ಭಾಗವಹಿಸಿ ಜನಪ್ರತಿನಿಧಿಗಳಿಗಿಂತ ಹೆಚ್ಚಿನ ಮಟ್ಟದ ಜನ ಮನ್ನಣೆ ಮತ್ತು ಹೆಸರು ಗಳಿಸಿದ್ದು, ಅವರಲ್ಲಿ ಜನತೆ ಕಂಡುಕೊಂಡಿರುವ ಕರ್ತೃತ್ವ ಶಕ್ತಿಯನ್ನು ತೋರಿಸುತ್ತದೆ

ಕೊಟ್ಟೂರು: ನಮ್ಮನ್ನಗಲಿದ ಎಂಎಂಜೆ ಹರ್ಷವರ್ಧನ ಸೇರಿದಂತೆ ಎಂಎಂಜೆ ಕುಟುಂಬದ ನಾಲ್ಕು ತಲೆಮಾರಿನವರು ಉಜ್ಜಯಿನಿ ಸದ್ಧರ್ಮ ಪೀಠದ ಎಲ್ಲ ಬಗೆಯ ಬೆಳವಣಿಗೆಗೆ ರಕ್ಷಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತ ಬಂದಿರುವುದು ಸದಾ ಸ್ಮರಣೀಯ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ಗುರುವಾರ ಪಟ್ಟಣದ ಹರಿಪ್ರಿಯ ಕಲ್ಯಾಣ ಮಂಟಪದಲ್ಲಿ ಎಂಎಂಜೆ ಕುಟುಂಬದವರು ಆಯೋಜಿಸಿದ್ದ ಶಿವಗಣಾರಾಧನೆ ಮತ್ತು ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಎಂಎಂಜೆ ಹರ್ಷವರ್ಧನ ವ್ಯಕ್ತಿಯಾಗಿರದೇ ಬಹು ಬಗೆಯ ಶಕ್ತಿಯಾಗಿ ಧಾರ್ಮಿಕ, ಸಾಮಾಜಿಕ, ಮತ್ತಿತರ ಬಹುಪಯೋಗಿ ಕಾರ್ಯಗಳಲ್ಲಿ ಭಾಗವಹಿಸಿ ಜನಪ್ರತಿನಿಧಿಗಳಿಗಿಂತ ಹೆಚ್ಚಿನ ಮಟ್ಟದ ಜನ ಮನ್ನಣೆ ಮತ್ತು ಹೆಸರು ಗಳಿಸಿದ್ದು, ಅವರಲ್ಲಿ ಜನತೆ ಕಂಡುಕೊಂಡಿರುವ ಕರ್ತೃತ್ವ ಶಕ್ತಿಯನ್ನು ತೋರಿಸುತ್ತದೆ ಎಂದರು.

ಶಾಸಕ ಕೆ.ನೇಮರಾಜ ನಾಯ್ಕ ಮಾತನಾಡಿ, ಧಾರ್ಮಿಕ ಪ್ರಸಿದ್ಧ ಕೊಟ್ಟೂರು ಸರ್ವಾಂಗೀಣ ಅಭಿವೃದ್ಧಿಗೆ ಎಂಎಂಜೆ ಹರ್ಷವರ್ಧನ ಹಲವು ಬಗೆಯ ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೆ ತರಲು ತಮ್ಮ ಮೂಲಕ ಸರ್ಕಾರದ ಮೇಲೆ ನಿರಂತರ ಒತ್ತಡ ತರುವ ಕಾರ್ಯ ಮಾಡುತ್ತ ಬಂದಿದ್ದರು. ಈ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿ ಬಾಗಿಲು ನಿರ್ಮಾಣ ಕಾರ್ಯಕ್ಕೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ತೀವ್ರ ಬಗೆಯಲ್ಲಿ ಗಮನ ಹರಿಸಿ ₹5 ಕೋಟಿ ವೆಚ್ಚದಲ್ಲಿ ಈ ಕಾರ್ಯವನ್ನು ನೆರೆವೇರಿಸಲು ಆಡಳಿತಾತ್ಮಕ ಒಪ್ಪಿಗೆಯನ್ನು ಕಳೆದ ವಾರ ನೀಡಿದ್ದಾರೆ ಎಂದರು.

ಕೊಟ್ಟೂರು ಪಟ್ಟಣದಲ್ಲಿ ಪ್ರತಿ ವಾರ್ಡ್‌ನಲ್ಲಿ ₹2 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಎಂಎಂಜೆ ಹರ್ಷವರ್ಧನವರ ಒತ್ತಾಸೆಯೇ ಕಾರಣ. ಸಮಗ್ರವಾಗಿ ಕೊಟ್ಟೂರು ಅಭಿವೃದ್ಧಿಯಾಗಬೇಕೆಂಬ ಬಹು ಬಗೆಯ ಆದಮ್ಯ ಕನಸು ಹೊಂದಿದ್ದ ಜನಪರ ಕಾಳಜಿಯ ನಾಯಕರು ಎಂದು ಅವರು ಬಣ್ಣಿಸಿದರು.

ವರಸದ್ಯೋಜಾತ ಸ್ವಾಮೀಜಿ, ಪ್ರಶಾಂತ ಸಾಗರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಪಂ ಮಾಜಿ ಉಪಾಧ್ಯಕ್ಷ ಡಿ.ಎಚ್. ದೊಡ್ಡರಾಮಣ್ಣ, ಕನ್ನಿಹಳ್ಳಿ ಚಂದ್ರಶೇಖರ್, ಬಸಾಪುರ ಪಂಪಾಪತಿ ಮತ್ತಿತರರು ಹರ್ಷವರ್ಧನರ ಕಾರ್ಯ ವೈಖರಿ ಸ್ಮರಿಸಿದರು.

ನುಡಿ ನಮನ ಕಾರ್ಯಕ್ರಮ ಆರಂಭಗೊಂಡ ಅವರ ಭಾವಚಿತ್ರಕ್ಕೆ ಜಗದ್ಗುರು ಮತ್ತಿತರ ಗಣ್ಯರು ಪುಷ್ಪಾರ್ಚನೆ ಮಾಡಿದರು. ನಂತರ ಸಭೆಯಲ್ಲಿ ಮೃತರ ಗೌರವಾರ್ತ 2 ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಿದರು.

ಎಂಎಂಜೆ ಶೋಬಿತ್, ಎಂಎಂಜೆ ಶರತ್, ಎಂಎಂಜೆ ಸ್ವರೂಪಾನಂದ, ಎಂಎಂಜೆ ಸತ್ಯಪ್ರಕಾಶ, ಎಂಎಂಜೆ ಕುಮಾರಸ್ವಾಮಿ, ಗೀತಾ ಹರ್ಷವರ್ಧನ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ ಮತ್ತಿತರ ಗಣ್ಯರಿದ್ದರು.

ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.