ಸಾರ್ವಜನಿಕರು ಬಳಸಿ ಬಿಸಾಡಿದ ಮೊಬೈಲ್ ಹಾಗೂ ಅವುಗಳ ಲೀಥಿಯಂ-ಐಯಾನ್ ಬ್ಯಾಟರಿಗಳಿಂದ ಪರಿಸರಕ್ಕಾಗುವ ಹಾನಿ ತಡೆಯುವ ಉದ್ದೇಶದಿಂದ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕನ್ನಡಪ್ರಭ ವಾರ್ತೆ ಸೈದಾಪುರ
ಸಾರ್ವಜನಿಕರು ಬಳಸಿ ಬಿಸಾಡಿದ ಮೊಬೈಲ್ ಹಾಗೂ ಅವುಗಳ ಲೀಥಿಯಂ-ಐಯಾನ್ ಬ್ಯಾಟರಿಗಳಿಂದ ಪರಿಸರಕ್ಕಾಗುವ ಹಾನಿ ತಡೆಯುವ ಉದ್ದೇಶದಿಂದ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಮಾರ್ಗದರ್ಶಕ ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ, 10 ನೇ ತರಗತಿ ವಿದ್ಯಾರ್ಥಿನಿ ಸಂಜನಾ ಹಾಗೂ 9 ನೇ ತರಗತಿ ವಿದ್ಯಾರ್ಥಿನಿ ಸಿಂಧು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರಿಗೆ ವಿಷಯ ಮನವರಿಕೆ ಮಾಡಿಕೊಟ್ಟರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಮೊಬೈಲ್ ಬ್ಯಾಟರಿಗಳಲ್ಲಿರುವ ರಾಸಾಯನಿಕಗಳು ಮಣ್ಣು ಮತ್ತು ನೀರನ್ನು ಸೇರುವುದರಿಂದ ಉಂಟಾಗುವ ಆಪತ್ತುಗಳ ಬಗ್ಗೆ ಮಾಹಿತಿ ನೀಡಿದರು. ಹಳೆಯ ಹಾಗೂ ಕೆಟ್ಟುಹೋದ ಲೀಥಿಯಂ ಬ್ಯಾಟರಿಗಳನ್ನು ಎಲ್ಲೆಂದರಲ್ಲಿ ಎಸೆಯದೆ, ಸೂಕ್ತ ರೀತಿಯಲ್ಲಿ ಮರುಬಳಕೆ ಮತ್ತು ವಿಲೇವಾರಿ ಮಾಡುವುದರ ಪ್ರಾಮುಖ್ಯತೆ ತಿಳಿಸಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ವಿಜ್ಞಾನದ ವಿಷಯವನ್ನು ಸಮಾಜಕ್ಕೆ ತಲುಪಿಸುವ ಇಂತಹ ಜಾಗೃತಿ ಅಭಿಯಾನಗಳು ಅಭಿನಂದನೀಯ. ಇ-ತ್ಯಾಜ್ಯ ನಿರ್ವಹಣೆಯ ಕುರಿತು ವಿದ್ಯಾರ್ಥಿಗಳು ಕೈಗೊಂಡ ಈ ಸಮಾಜಮುಖಿ ಕಾರ್ಯ ಜಿಲ್ಲೆಯ ಇತರ ಶಾಲೆಗಳಿಗೂ ಮಾದರಿಯಾಗಿಲಿ ಎಂದು ಹೇಳಿದರು.ಶಿಕ್ಷಕ ರಾಚಯ್ಯ ಸ್ವಾಮಿ ಮಾತನಾಡಿ, ಇ-ತ್ಯಾಜ್ಯ ಇಂದು ದೊಡ್ಡ ಸವಾಲಾಗಿದೆ. ವಿದ್ಯಾರ್ಥಿ ಹಂತದಲ್ಲೇ ಪರಿಸರ ಜಾಗೃತಿ ಮೂಡಿಸುವುದು ಮತ್ತು ಸಾರ್ವಜನಿಕರಿಗೆ ಇ-ತ್ಯಾಜ್ಯ ಸಂಗ್ರಹಣೆ ಹಾಗೂ ಮರುಬಳಕೆಯ ಅರಿವು ಮೂಡಿಸುವುದು ಕಾಲದ ಅಗತ್ಯ ಎಂದು ಹೇಳಿದರು.
ಅಭಿಯಾನದಲ್ಲಿ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಸಿಆರ್.ಪಿ.ಲಿಂಗಾರೆಡ್ಡಿ, ವಿಶ್ವನಾಥ ಕಣೇಕಲ್, ಸತೀಶ ಪುರ್ಮಾಂ, ಶಿವಕುಮಾರ ಬಂಡಿ, ಅಭಿಲಾಷ, ನಿಜಗುಣಚಾರ್ಯ, ಪ್ರೌಢ ಶಾಲಾ ವಿದ್ಯಾರ್ಥಿಗಳು, ಡಿ.ಎಲ್.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.ಆಧುನಿಕ ತಂತ್ರಜ್ಞಾನ ಬೆಳೆದಂತೆ ಇ-ತ್ಯಾಜ್ಯದ ಪ್ರಮಾಣವೂ ಹೆಚ್ಚುತ್ತಿದೆ. ಹಳೆಯ ಲಿಥಿಯಂ ಬ್ಯಾಟರಿಗಳಿಂದ ಸಮಾಜ ಹಾಗೂ ಪರಿಸರಕ್ಕಾಗುವ ಹಾನಿಯ ಬಗ್ಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೈದಾಪುರದಲ್ಲಿ ಮೂಡಿಸಿದ ಜಾಗೃತಿ ಕಾರ್ಯ ಶ್ಲಾಘನೀಯ ಎಂದು ಡಯಟ್ ನೋಡಲ್ ಅಧಿಕಾರಿ ವಿದ್ಯಾ ಸಜ್ಜನ್ ಹೇಳಿದರು.