ಹೊಸಪೇಟೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರವಾಸೋದ್ಯಮ ಇಲಾಖೆ ನೀಡುವ ‘ಮೊಬೈಲ್ ಕ್ಯಾಂಟೀನ್’ ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಯೋಜನೆಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯಬೇಕು. ಜತೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಹಂಪಿ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ಅನುಷ್ಠಾನವಾಗಬೇಕು. ಎಂದು ಹೇಳಿದರು.ಜಿಲ್ಲೆಗೆ ಬರುವ ದೇಶ-ವಿದೇಶಿ ಪ್ರವಾಸಿಗರ ಗಮನದಲ್ಲಿಟ್ಟುಕೊಂಡು, ಹಂಪಿ, ಕಮಲಾಪುರ, ಹೊಸಪೇಟೆ ನಗರದ ಪ್ರಮುಖ ವೃತ್ತಗಳು ಹಾಗೂ ಪ್ರವಾಸಿಗರು ಹೆಚ್ಚಾಗಿ ಸಂಚರಿಸುವ ಹೆದ್ದಾರಿಯ ಆಯಕಟ್ಟಿನ ಜಾಗಗಳಲ್ಲಿ ಈ ಸಂಚಾರಿ ಕ್ಯಾಂಟೀನ್ ನಡೆಸಲು ಅವಕಾಶ ಕಲ್ಪಿಸಿ ಕೊಡಬೇಕು. ಸಹಾಯಧನ ಹಾಗೂ ಸಾಲ ಸೌಲಭ್ಯ ಸಕಾಲಕ್ಕೆ ಸಿಗುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದರು.
ಪ್ಲಾಸ್ಟಿಕ್ ನಿಷೇಧ:ಕಸ ವಿಲೇವಾರಿಗೆ ಜೈವಿಕವಾಗಿ ಕೊಳೆಯುವ ವಸ್ತುಗಳ ಬಳಸಬೇಕು ಮತ್ತು ತ್ಯಾಜ್ಯ ವಿಲೇವಾರಿಗೆ ಕಸದ ಡಬ್ಬಿ ಬಳಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಹಂಪಿಯ ರಕ್ಷಿತ ಮತ್ತು ಬಫರ್ ವಲಯದ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಧಕ್ಕೆ ಬಾರದಂತೆ ನಿಯಮ ಪಾಲನೆ ಮಾಡಬೇಕು ಎಂದು ಅವರು ಎಚ್ಚರಿಸಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ ತಳಕೇರಿ ಮಾತನಾಡಿ, 2024-25ನೇ ಸಾಲಿಗೆ ಈ ಯೋಜನೆಯಡಿ, ಪರಿಶಿಷ್ಟ ಜಾತಿಗೆ 6 ಮತ್ತು ಪರಿಶಿಷ್ಟ ಪಂಗಡಕ್ಕೆ 4 ಸೇರಿ ಒಟ್ಟು 10 ಫಲಾನುಭವಿಗಳಿಗೆ ನೀಡುವ ಗುರಿ ಹೊಂದಲಾಗಿದೆ. ಈ ಪೈಕಿ 4 ಫಲಾನುಭವಿಗಳ ಅರ್ಜಿ ಅನುಮೋದನೆಗೊಂಡು ಸಹಾಯಧನ ಮಂಜೂರು ಮಾಡಲಾಗಿದೆ. ಅರ್ಹ ಫಲಾನುಭವಿಗಳಿಗೆ ಶೀಘ್ರದಲ್ಲೇ ವಾಹನ ವಿತರಣೆ ಮಾಡಲಾಗುವುದು. ಉಳಿದ 6 ಫಲಾನುಭವಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗುವುದು ಎಂದರು.
2025-26ನೇ ಸಾಲಿಗಾಗಿ ಪರಿಶಿಷ್ಟ ಜಾತಿಗೆ 6 ಮತ್ತು ಪರಿಶಿಷ್ಟ ಪಂಗಡಗಕ್ಕೆ 4 ಸೇರಿ ಒಟ್ಟು 10 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಲಾಗಿದೆ. ಅದಕ್ಕಾಗಿ ಪರಿಶಿಷ್ಟ ಜಾತಿ ಸಮುದಾಯದಿಂದ 25 ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಂದ 4 ಸೇರಿ ಒಟ್ಟು 29 ಅಭ್ಯರ್ಥಿಗಳಿಂದ ಅರ್ಜಿ ಸ್ವೀಕೃತವಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿ ಇದೆ. ಫಲಾನುಭವಿಗಳ ವಯಸ್ಸು, ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕ ಮತ್ತು ವಯೋಮಿತಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರವಿಕುಮಾರ್ ಉಪಸ್ಥಿತರಿದ್ದರು.