ಅಂಗನವಾಡಿ ಕಾರ್ಯಕರ್ತರಿಗೆ ಕೊಟ್ಟ ಮೊಬೈಲ್‌ ಕೇಂದ್ರದ್ದು

| Published : Jul 03 2024, 12:24 AM IST

ಸಾರಾಂಶ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುತ್ತಿರುವ ಮೊಬೈಲ್‌ ಕೇಂದ್ರ ಮೋದಿ ಸರ್ಕಾರದ್ದು. ಅದು ನಮ್ಮದು. ಸೀರೆ ಮತ್ತು ಮೆಡಿಕಲ್‌ ಕಿಟ್‌ ರಾಜ್ಯ ಸರ್ಕಾರದ್ದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುತ್ತಿರುವ ಮೊಬೈಲ್‌ ಕೇಂದ್ರ ಮೋದಿ ಸರ್ಕಾರದ್ದು. ಅದು ನಮ್ಮದು. ಸೀರೆ ಮತ್ತು ಮೆಡಿಕಲ್‌ ಕಿಟ್‌ ರಾಜ್ಯ ಸರ್ಕಾರದ್ದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್‌ ಸೀರೆ ಮತ್ತು ಮೆಡಿಕಲ್ ಕಿಟ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ಕೊಟ್ಟಿರುವ ಸವಲತ್ತುಗಳನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ತಿಳಿಸಿದರು.ಮಕ್ಕಳು ಪೋಷಕರಿಂದ ಹೆಚ್ಚು ಸಮಯ ಅಂಗನವಾಡಿ ಕಾರ್ಯಕರ್ತರ ಬಳಿ ಕಳೆಯುತ್ತಾರೆ. ತಾಯಿಗಿಂತಲೂ ಹೆಚ್ಚಿನ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತರ ಮೇಲಿದೆ. ಅಂಗನವಾಡಿಗಳಿಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಕಾಣಬೇಕು ಮಕ್ಕಳಿಗೆ ಮಾಡುವ ಸೇವೆಯಿಂದ ಸಿಗುವ ಪುಣ್ಯ ಮತ್ತು ತೃಪ್ತಿ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಅಂಗನವಾಡಿ ಕೇಂದ್ರಗಳು ಮಕ್ಕಳ ಭವಿಷ್ಯದ ಭದ್ರ ಬುನಾದಿಯಾಗಬೇಕು ಎಂದರು.ನನ್ನ ದೃಷ್ಟಿಯಲ್ಲಿ ತಾಯಿ ನಂತರ ಯಾರಿಗಾದರೂ ಗೌರವ ಸಿಗಬೇಕೆಂದರೇ ಅದು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಗಬೇಕು. ಅವರು ಮಾಡುವ ಸೇವೆ ನಿಜವಾಗಿಯೂ ಪ್ರಶಂಸನೀಯ, ಅತ್ಯಂತ ಕಡಿಮೆ ಸಂಬಳದಲ್ಲಿ ಅವರು ಮಾಡುವ ಸೇವೆ ಅಪ್ರತಿಮವಾಗಿದೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಅಭಯ ಹೇಳಿಕೆಗೆ ಸಚಿವೆ ಹೆಬ್ಬಾಳಕರ ಆಕ್ಷೇಪ

ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮೊಬೈಲ್ ಕೇಂದ್ರ ಸರಕಾರದ್ದು ಎನ್ನುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಇಂತಹ ಯೋಜನೆಗಳು ಯಾವತ್ತೂ ಕೇಂದ್ರ ಮತ್ತು ರಾಜ್ಯ ಸರ್ಕಾರದ 60ಃ 40ರ ಅನುಪಾತದಲ್ಲಿರುತ್ತವೆ. ಹಾಗೆಯೇ ರಾಜ್ಯ ಸರ್ಕಾರದ ತೆರಿಗೆಯಲ್ಲೂ ಕೇಂದ್ರ ಸರಕಾರಕ್ಕೆ ಪಾಲು ಹೋಗುತ್ತದೆ. ಕೇಂದ್ರ ಸರ್ಕಾರ ಪೋಷಣ್ ಅಭಿಯಾನದ ಅಡಿಯಲ್ಲಿ ಅನುದಾನ ನೀಡಿದೆಯೇ ವಿನಃ ಇದೇನೂ ವಿಶೇಷ ಅನುದಾನವಲ್ಲ. ಇಷ್ಟು ವರ್ಷ ಶಾಸಕರಾಗಿರುವವರು ಯೋಜನೆಗಳ ಕುರಿತು ಮಾಹಿತಿ ಹೊಂದಿರಬೇಕಾಗುತ್ತದೆ. ಯಾವುದೇ ಮಾಹಿತಿ ಇಲ್ಲದೇ ಈ ರೀತಿ ಮಾತನಾಡುವುದು ಸಮಂಜಸವಲ್ಲ ಎಂದು ತಿರುಗೇಟು ನೀಡಿದ್ದಾರೆ.ಯಾರು ಹೆಚ್ಚು ಕೆಲಸ ಮಾಡುತ್ತಾರೆ ಅವರ ಬಗ್ಗೆ ಟೀಕೆಗಳನ್ನು ಮಾಡುವುದು ಸಹಜ. ಟೀಕೆಗಳು ಎದುರಾದರೇ ನಾವು ಹೆಚ್ಚು ಕೆಲಸ ಮಾಡುತ್ತಿದ್ದೇವೆಂದು ಅರ್ಥೈಸಿಕೊಂಡು ಕೆಲಸ ಮಾಡಬೇಕು. ನಾನು ಶಾಸಕನಾಗಿ ಇಷ್ಟೆಲ್ಲ ಕೆಲಸ ಮಾಡಿದ್ದರೂ ನನ್ನ ಬಗ್ಗೆಯೂ ಟೀಕೆ ಮಾಡುತ್ತಾರೆ. ಅದರ ಬಗ್ಗೆ ತೆಲೆ ಕೆಡಿಸಿಕೊಳ್ಳದೇ ತಮಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು.-ಅಭಯ ಪಾಟೀಲ, ಶಾಸಕ.