ಸಾರಾಂಶ
ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣದ ನಿರೀಕ್ಷೆಯಲ್ಲಿ ಗುಣಮಟ್ಟದ ಶಾಲೆಗೆ ಸೇರಿಸಿದ್ದರೂ ಮಕ್ಕಳಿಗೆ ಮೊಬೈಲ್ ಫೋನ್ ನೀಡಿ ತಮ್ಮ ಪಾಡಿಗೆ ಇದ್ದು ಬಿಡುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೊಬೈಲ್ ಸಹವಾಸದಿಂದ ಮಕ್ಕಳು ಹಾಳಾಗುತ್ತಿರುವುದು ಕಳವಳಕಾರಿ ಎಂದು ಖ್ಯಾತ ವೈದ್ಯ ಪ್ರೊ. ಬಿ. ದೇವದಾಸ್ ರೈ ಹೇಳಿದ್ದಾರೆ. ಮಂಗಳೂರಿನ ಕೂಳೂರು ಶ್ರೀ ಅಮೃತ ನರ್ಸರಿ ಸ್ಕೂಲ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಇಂದಿನ ಮಕ್ಕಳಲ್ಲಿ ಮಾನಸಿಕ ಖಿನ್ನತೆಗೆ ಮೊಬೈಲ್ ಬಳಕೆ ಮತ್ತು ಡ್ರಗ್ಸ್ ಸೇವನೆಯೇ ಕಾರಣ ಎಂದು ಖ್ಯಾತ ವೈದ್ಯ ಪ್ರೊ. ಬಿ. ದೇವದಾಸ್ ರೈ ಹೇಳಿದರು.ಅವರು ಭಾನುವಾರ ಕೂಳೂರು ಶ್ರೀ ಅಮೃತ ನರ್ಸರಿ ಸ್ಕೂಲ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು. ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಶಿಕ್ಷಣದ ನಿರೀಕ್ಷೆಯಲ್ಲಿ ಗುಣಮಟ್ಟದ ಶಾಲೆಗೆ ಸೇರಿಸಿದ್ದರೂ ಮಕ್ಕಳಿಗೆ ಮೊಬೈಲ್ ಫೋನ್ ನೀಡಿ ತಮ್ಮ ಪಾಡಿಗೆ ಇದ್ದು ಬಿಡುತ್ತಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮೊಬೈಲ್ ಸಹವಾಸದಿಂದ ಮಕ್ಕಳು ಹಾಳಾಗುತ್ತಿರುವುದು ಕಳವಳಕಾರಿ ಎಂದರು.
ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ವಿದ್ಯಾ ಮಂದಿರ ಎಲ್ಲರ ಜೀವನವನ್ನು ರೂಪಿಸುವ ಜ್ಞಾನ ದೇಗುಲ. ಕಲಿಯುವ ಮಕ್ಕಳಲ್ಲಿ ಭಾಷಾ ಬೇಧ, ಮತ ಬೇಧವಿಲ್ಲದೆ ಉತ್ತಮ ಸಂಸ್ಕಾರ ಪಡೆದು ಮುಂದೆ ಉತ್ತಮ ಪ್ರಜೆಗಳಾಗಿ ಪ್ರಸಿದ್ಧಿ ಪಡೆಯುವಂತಾಲಿ ಎಂದು ಆಶಿಸಿದರು.ಮುಖ್ಯ ಅತಿಥಿ ಪಲ್ಗುಣಿ ಇಂಡಸ್ಟ್ರಿ ಮಾಲಕಿ ಸರಸ್ವತಿ ಎಸ್.ಕೆ. , ಅಮೃತ ವಿದ್ಯಾ ಟ್ರಸ್ಟ್‌ನ ಟ್ರಸ್ಟಿ ಸಿ.ಕೆ. ಪದ್ಮನಾಭ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸಪ್ನಾ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿಯರಾದ ಸಿಲ್ಜಾ, ಅನಿತಾ ಎಸ್., ಗೀತಾಲಕ್ಷ್ಮೀ, ವೈಶಾಲಿ, ಸಹಾಯಕಿಯರಾದ ಕುಸುಮಾ, ಅನಿತಾ, ಮಮತಾ, ಸುನಿತಾ ಅವರನ್ನು ಗೌರವಿಸಲಾಯಿತು. ಶಿಕ್ಷಕಿಯರಾದ ಅನಿತಾ ಶಾಂತಕುಮಾರ್, ಸಿಲ್ಜಾ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗೀತಾಲಕ್ಷ್ಮೀ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.