ಜೈಲ್‌ನಲ್ಲಿ ಮೊಬೈಲ್, ಕತ್ತರಿ, ಯುಎಸ್‌ಬಿ ಚಾರ್ಜರ್‌ ಪತ್ತೆ

| Published : Oct 25 2023, 01:15 AM IST

ಸಾರಾಂಶ

ಓತಿಘಟ್ಟದ ಕೇಂದ್ರ ಕಾರಾಗೃಹ ಮೇಲೆ ಪೊಲೀಸರ ದಾಳಿ
- ಓತಿಘಟ್ಟದ ಕೇಂದ್ರ ಕಾರಾಗೃಹ ಮೇಲೆ ಪೊಲೀಸರ ದಾಳಿ । ಸುಮೊಟೋ ಪ್ರಕರಣ ದಾಖಲು - - - ಮುಖ್ಯಾಂಶ - ಜಿಲ್ಲಾ ಎಸ್‌ಪಿ ಸೂಚನೆ ಮೇರೆಗೆ ಡಿವೈಎಸ್‌ಪಿ, ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು, ಡಿಎಆರ್‌ ಸಿಬ್ಬಂದಿ ಕಾರ್ಯಾಚರಣೆ - ಜೈಲ್‌ ಆವರಣದ ಕೈತೋಟ ಗುಂಡಿಯಲ್ಲಿ ಪತ್ತೆಯಾದ ಸಿಮ್‌ ಇಲ್ಲದ ಮೊಬೈಲ್‌ - ಹಲವು ವಸ್ತುಗಳು ಪತ್ತೆ ಹಿನ್ನೆಲೆ ತುಂಗಾ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲು - ಜೈಲು ಸಿಬ್ಬಂದಿ ಮೇಲೆ ಹೆಚ್ಚಿದ ಶಂಕೆ: ಹೈ ಪ್ರೊಫೈಲ್‌ ಪ್ರಕರಣ ಇರಬಹುದಾ? - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜೈಲಿನಲ್ಲಿ ಮೊಬೈಲ್ ಬಳಕೆ ಆಗುತ್ತಿದೆ ಎಂಬ ಆರೋಪದ ಹಿನ್ನೆಲೆ ಶಿವಮೊಗ್ಗ ಹೊರವಲಯದ ಓತಿಘಟ್ಟದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಬೀಡಿ, ಮೊಬೈಲ್‌, ಬೆಂಕಿ ಪೊಟ್ಟಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಸೂಚನೆ ಮೇರೆಗೆ ಡಿವೈಎಸ್‌ಪಿ, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು, ಡಿಎಆರ್‌ ಸಿಬ್ಬಂದಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿದ್ದರು. ಜೈಲಿನ ಬ್ಲಾಕ್‌ಗಳಲ್ಲಿ ಎಲ್ಲ ಸೆಲ್‌ಗಳಲ್ಲಿಯೂ ತಪಾಸಣೆ ನಡೆಸಲಾಯಿತು. ತುಂಗಾ ಬ್ಲಾಕ್‌ ಕೊಠಡಿಯೊಂದರ ಮುಂಭಾಗದ ಕೈ ತೋಟದಲ್ಲಿ ಗಿಡಗಳ ಮಧ್ಯೆ, ತಪಾಸಣೆ ವೇಳೆ ಗುಂಡಿ ತೆಗೆದು ಮುಚ್ಚಿರುವುದು ಕಂಡುಬಂದಿದೆ. ಅಲ್ಲಿ ಮಣ್ಣು ಅಗೆದು ಪರಿಶೀಲಿಸಿದಾಗ ಪ್ಲಾಸ್ಟಿಕ್‌ ಕವರ್‌ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್‌ ಪತ್ತೆಯಾಗಿದೆ. ಅದರಲ್ಲಿ ಯಾವುದೇ ಸಿಮ್‌ ಇರಲಿಲ್ಲ. ಇನ್ನೊಂದು ಸೆಲ್‌ ಸಮೀಪ ಗಿಡಗಳ ಮಧ್ಯೆ ಮಂಗಳೂರು ಸ್ಪೆಷಲ್‌ ಬೀಡಿಗಳು, ಬೆಂಕಿ ಪೊಟ್ಟಣ, ಯುಎಸ್‌ಬಿ ಚಾರ್ಜರ್‌ ಕೇಬಲ್‌, ಚಿಕ್ಕ ಬ್ಲೇಡ್‌, ಚಿಲುಮೆಗಳು, ಕತ್ತರಿ ಪತ್ತೆಯಾಗಿದೆ. ಇವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಆತಿಥ್ಯ ಮುಂದುವರಿದಿದೆ. ಹೊರಗಡೆ ಕ್ರಿಮಿನಲ್ ಆದವರಿಗೆ ಜೈಲು ಶಿಕ್ಷೆ ವಿಧಿಸಿ ಸಮಾಜದಲ್ಲಿ ಸುಧಾರಿತ ವ್ಯಕ್ತಿಗಳಾಗಿ ಹೊರಗೆ ಬರಲಿ ಎಂಬ ಕಲ್ಪನೆ ಕಲ್ಪನೆಯಾಗಿಯೇ ಉಳಿದಿದೆ. ಸುಧಾರಿತ ವ್ಯಕ್ತಿಗಳಾಗುವ ಕ್ರಿಮಿನಲ್‌ಗಳಿಗೆ ಜೈಲಿನಲ್ಲಿ ಎಲ್ಲ ಮೊಬೈಲು, ಬೀಡಿಗಳು, ಗಾಂಜಾಗಳು ಸಪ್ಲೆ ಆಗುತ್ತಿವೆ ಎಂದರೆ ಅಚ್ಚರಿ ಪಡುವಂತಾಗಿದೆ. ಜೈಲು ಸಿಬ್ಬಂದಿಗಳೇ ಅಪರಾಧಿಗಳ ಜೊತೆ ಕೈ ಜೋಡಿಸುತ್ತಿದ್ದಾರಾ ಎಂಬ ಅನುಮಾನ ಹೆಚ್ಚಾಗಿದೆ. ಈ ಅನುಮಾನಕ್ಕೆ ಈ ಎಫ್ಐಆರ್ ಪುಷ್ಠಿ ನೀಡುತ್ತಿದೆ. ಅ.21ರಂದು ಕೇಂದ್ರ ಕಾರಾಗೃಹದಲ್ಲಿ ತುಂಗ ನಗರ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ಕಾರ್ಬನ್ ಕಂಪನಿ ಮೊಬೈಲ್ ಪತ್ತೆಯಾಗಿದೆ. ಈ ಮೊಬೈಲ್‌ ಜೈಲಿನ ತೋಟದ ನೆಲದಲ್ಲಿ ಹೂತುಹಾಕಲಾಗಿತ್ತು. ಅನುಮಾನದ ಮೇರೆಗೆ ಅಗೆದಾಗ ಮೊಬೈಲ್ ಪತ್ತೆಯಾಗಿದೆ. ಸಿಮ್‌ಗಳನ್ನ ತೆಗೆದು, ಪ್ಲಾಸ್ಟಿಕ್ ಕವರ್‌ನಲ್ಲಿ ಮೊಬೈಲ್‌ ಮುಚ್ಚಿ ಮಣ್ಣಿನಲ್ಲಿ ಹೂತು ಹಾಕಲಾಗಿದೆ. ದಾಳಿಯ ವೇಳೆ ಈ ಮೊಬೈಲ್ ಮತ್ತು ಕತ್ತರಿ, ರಾಶಿ ರಾಶಿ ಮಂಗಳೂರು 93 ನಂಬರ್ ಮಾರ್ಕಿನ ಬೀಡಿಗಳು ರಾಶಿ ರಾಶಿ ಬೆಂಕಿಪೊಟ್ಟಣಗಳು ಪತ್ತೆಯಾಗಿವೆ. ತುಂಗಾ‌ ಬ್ಲಾಕ್ 12ರ ಮುಂದಿನ ತೋಟದಲ್ಲಿ ಮೊಬೈಲ್ ಪತ್ತೆಯಾದರೆ, ಬ್ಲಾಕ್ 36ರ ಮುಂಭಾಗದಲ್ಲಿ ಕತ್ತರಿಯನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅಲ್ಲಲ್ಲಿ ಬೀಡಿಗಳ ಪ್ಯಾಕ್‌ಗಳು ಪತ್ತೆಯಾಗಿವೆ. ಜೈಲಿನ ಸಿಬ್ಬಂದಿಯ ಸಹಾಯವಿಲ್ಲದೇ ಇವೆಲ್ಲ ಹೇಗೆ ಒಳಗೆ ಹೋದವು ಎಂಬ ಅನುಮಾನಗಳು ಹುಟ್ಟಿಸಿವೆ. ಇದೊಂದು ಹೈಫ್ರೊಫೈಲ್ ಕೇಸ್ ಇರಬಹುದಾ‌ ಎಂಬ ಶಂಕೆ ಹುಟ್ಟುಹಾಕಿಸಿವೆ. ದಾಳಿ ಹಿನ್ನೆಲೆಯಲ್ಲಿ ಪತ್ತೆಯಾದ ವಸ್ತುಗಳ ಆಧಾರದ ಮೇರೆಗೆ ತುಂಗಾ ನಗರ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಜೈಲಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಈ ಎಫ್ಐಆರ್ ಪುಷ್ಠಿ ನೀಡುತ್ತಿದೆ. - - -