ಶಿಕ್ಷಕರನ್ನು ಗೌರವಿಸಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು
ಕುಷ್ಟಗಿ: ಮೊಬೈಲ್ ಜ್ಞಾನ ಮತ್ತು ಶಿಕ್ಷಣದ ಸಾಧನವಾಗಬೇಕೇ ಹೊರತು, ಮಕ್ಕಳ ಏಕಾಗ್ರತೆ, ಗುರಿ ಹಾಗೂ ಭವಿಷ್ಯ ಕಸಿಯುವ ವ್ಯಸನವಾಗಬಾರದು. ಅಪರಿಚಿತರೊಂದಿಗೆ ಅನಗತ್ಯ ಸ್ನೇಹ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ವೈಯಕ್ತಿಕ ಫೋಟೊ, ಮಾಹಿತಿಯ ಹಂಚಿಕೆಯಿಂದ ಮಕ್ಕಳು ದೂರವಿರಬೇಕು ಎಂದು ಯೂನಿಸೆಫ್ ಪ್ರಾದೇಶಿಕ ಸಂಯೋಜಕ ಕೆ.ರಾಘವೇಂದ್ರ ಭಟ್ ಸಲಹೆ ನೀಡಿದರು.
ಪಟ್ಟಣದ ಶ್ರೀರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆದ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು. ಅನಗತ್ಯ ಗೆಳೆತನದಿಂದ ದೂರವಿದ್ದು, ಸಮವಯಸ್ಕರೊಂದಿಗೆ ಮಾತ್ರ ಸ್ನೇಹ ಬೆಳೆಸಿಕೊಳ್ಳಬೇಕು. ಕುಟುಂಬಕ್ಕೆ ಆದ್ಯತೆ ನೀಡಿ ಪಾಲಕರು ಹಾಗೂ ಶಿಕ್ಷಕರೊಂದಿಗೆ ಮುಕ್ತವಾಗಿ ಮಾತನಾಡಬೇಕು. ಶಿಕ್ಷಕರನ್ನು ಗೌರವಿಸಿ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಅತಿಯಾದ ಮೊಬೈಲ್ ಬಳಕೆಯಿಂದ ಸ್ಕ್ರೀನ್ ವ್ಯಸನ, ಏಕಾಗ್ರತೆ ಕೊರತೆ, ಸಿಟ್ಟು ಹಾಗೂ ಒಂಟಿತನ ಹೆಚ್ಚಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿ ಪರಿಶೀಲಿಸದೇ ನಂಬುವ ಸಾಧ್ಯತೆಯೂ ಇದೆ. ಹೀಗಾಗಿ ಮೊಬೈಲ್‌ನ್ನು ಅಧ್ಯಯನ, ಮಾಹಿತಿ ಹಾಗೂ ವೈಯಕ್ತಿಕ ಅಭಿವೃದ್ಧಿಗಾಗಿ ಮಾತ್ರ ಬಳಸಬೇಕು ಎಂದು ಹೇಳಿದರು.ಬಳ್ಳಾರಿಯ ಹಿರಿಯ ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ ಲೈಂಗಿಕ ಅಪರಾಧಗಳಿಂದ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ–2012 (ಪೋಕ್ಸೋ) ಹಾಗೂ ಮಕ್ಕಳಿಗೆ ದೊರೆಯುವ ಕಾನೂನು ನೆರವಿನ ಕುರಿತು ಉಪನ್ಯಾಸ ನೀಡಿದರು.
ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ಬಿನ್ನಾಳ ಪೋಕ್ಸೋ ಪ್ರಕರಣಗಳಿಂದ ಬಾಧಿತ ಕುಟುಂಬಗಳ ಅನುಭವ ಹಾಗೂ ಅವುಗಳಿಂದ ಕುಟುಂಬ ಮತ್ತು ಸಮಾಜದ ಮೇಲೆ ಉಂಟಾಗುವ ಪರಿಣಾಮ ಕುರಿತು ಕಥನ ಹಾಗೂ ವಿಶ್ಲೇಷಣೆಯ ಮೂಲಕ ಅರಿವು ಮೂಡಿಸಿದರು.ಸಿಪಿಐ ವಿಶ್ವನಾಥ ಹಿರೇಗೌಡ್ರ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರದ ಕುರಿತು ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಕ್ರಮ ಹಾಗೂ ಮಕ್ಕಳ ಸುರಕ್ಷತೆಗೆ ಇಲಾಖೆ ನೀಡುವ ಆದ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಬಾಲ್ಯವಿವಾಹ ಹಾಗೂ ಪೋಕ್ಸೋ ಪ್ರಕರಣ ತಡೆಯಲು ಸಾರ್ವಜನಿಕರು ಮಾಹಿತಿ ನೀಡಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.ಮಕ್ಕಳ ರಕ್ಷಣೆ ಕೇವಲ ಪೊಲೀಸ್ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜವಾಬ್ದಾರಿಯಲ್ಲ. ಕುಟುಂಬ, ಶಾಲೆ ಹಾಗೂ ಸಮಾಜದ ಪ್ರತಿಯೊಬ್ಬರೂ ಹೊಣೆಗಾರಿಕೆ ನಿರ್ವಹಿಸಿದಾಗ ಮಾತ್ರ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಾಧ್ಯ ಎಂದರು.
ಕೊನೆಯಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಯಿತು. ವಿದ್ಯಾರ್ಥಿಗಳು ಮಕ್ಕಳ ಹಕ್ಕು, ಪೋಕ್ಸೋ ಕಾಯ್ದೆ, ಮೊಬೈಲ್ ಬಳಕೆ, ಸಾಮಾಜಿಕ ಜಾಲತಾಣಗಳ ಸುರಕ್ಷತೆ ಹಾಗೂ ಬಾಲ್ಯವಿವಾಹ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಶ್ನೆ ಕೇಳಿ ಮಾಹಿತಿ ಪಡೆದುಕೊಂಡರು.