ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ನಿರ್ಮಾಣಗೊಂಡಿರುವ ಹಿನ್ನೆಲೆ ನಗರದ ಟಿಬಿ ಡ್ಯಾಂನಲ್ಲಿ ಕೇಂದ್ರ ಕೈಗಾರಿಕಾ ಪಡೆ (ಕೆಎಸ್ಐಎಸ್ಎಫ್‌) ವತಿಯಿಂದ ಮಾಕ್ ಡ್ರಿಲ್ ನಡೆಸಲಾಯಿತು.

ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ, ವಿದ್ವಂಸಕ ಕೃತ್ಯ ನಿಗ್ರಹದಳದಿಂದ ಪರಿಶೀಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಉದ್ವಿಗ್ನತೆ ನಿರ್ಮಾಣಗೊಂಡಿರುವ ಹಿನ್ನೆಲೆ ನಗರದ ಟಿಬಿ ಡ್ಯಾಂನಲ್ಲಿ ಕೇಂದ್ರ ಕೈಗಾರಿಕಾ ಪಡೆ (ಕೆಎಸ್ಐಎಸ್ಎಫ್‌) ವತಿಯಿಂದ ಮಾಕ್ ಡ್ರಿಲ್ ನಡೆಸಲಾಯಿತು.

ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದ ಆವರಣದಲ್ಲಿ ಕೇಂದ್ರ ಕೈಗಾರಿಕಾ ಪಡೆ ನೇತೃತ್ವದಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು. ದೇಶಾದ್ಯಂತ ಇರುವ ಡ್ಯಾಂಗಳಿಗೆ ಈಗಾಗಲೇ ಹೆಚ್ಚುವರಿ ಭದ್ರತೆ ನೀಡಲಾಗಿದೆ.

ಯುದ್ಧದ ಸನ್ನಿವೇಶ ಎದುರಾದರೆ ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು.

ಕೇವಲ ನಮ್ಮನ್ನು ರಕ್ಷಣೆ ಮಾಡೋದಲ್ಲದೇ ಡ್ಯಾಂ ರಕ್ಷಣೆ ಮಾಡಲು ಏನು ಮಾಡಬೇಕು ಎಂದು ತಜ್ಞರು ವಿವರಣೆ ನೀಡಿದರು.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೂಡ ನೀರು ಪಡೆಯುತ್ತವೆ. ಹಾಗಾಗಿ ಈ ಜಲಾಶಯದ ರಕ್ಷಣೆ ಅತಿ ಮುಖ್ಯವಾಗಿದೆ. ಹಾಗಾಗಿ ಈಗಾಗಲೇ ಕೇಂದ್ರ ಕೈಗಾರಿಕಾ ಪಡೆ ನೇತೃತ್ವದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇನ್ನೂ ಅತ್ತ ಮುನಿರಾಬಾದ್‌ ಮತ್ತು ಇತ್ತ ಟಿಬಿಡ್ಯಾಂ ಪೊಲೀಸರು ಕೂಡ ಗಸ್ತು ತಿರುಗುತ್ತಿದ್ದಾರೆ.

ಒಂದು ವೇಳೆ ಯುದ್ಧ ನಡೆದರೆ ಜಲಾಶಯದ ರಕ್ಷಣೆ ಅತಿ ಅವಶ್ಯವಾಗಿದೆ. ಹಾಗಾಗಿ ಜಲಾಶಯಕ್ಕೆ ಹೇಗೆ ಕಾವಲು ಕಾಯಬೇಕು. ಜಲಾಶಯಕ್ಕೆ ಧಕ್ಕೆ ಉಂಟಾದರೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರು ವಿವರಣೆ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಯುದ್ಧದ ಸಮಯದಲ್ಲಿ ಬೆಂಕಿ ನಂದಿಸುವ ಕುರಿತು ಕೂಡ ಮಾಹಿತಿ ನೀಡಿದರು.

ಈ ಮಾಕ್‌ ಡ್ರಿಲ್‌ನಲ್ಲಿ ತುಂಗಭದ್ರಾ ಜಲಾಶಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಸ್ಥಳೀಯ ಭದ್ರತಾ ಸಿಬ್ಬಂದಿ ಭಾಗವಹಿಸಿದ್ದರು.

ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ ಪರಿಶೀಲನೆ:

ಇನ್ನೂ ನಗರದ ರೈಲ್ವೆ ನಿಲ್ದಾಣದಲ್ಲಿ ಶ್ವಾನದಳ ಮತ್ತು ವಿದ್ವಂಸಕ ಕೃತ್ಯ ನಿಗ್ರಹದಳದಿಂದ ಪರಿಶೀಲನೆ ನಡೆಸಲಾಯಿತು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಪ್ರದೇಶ, ವಿಶ್ರಾಂತಿ ಕೊಠಡಿಗಳು, ಒಳ ಬರುವ ಮಾರ್ಗ ಮತ್ತು ಹೊರ ಬರುವ ಮಾರ್ಗ ಸೇರಿದಂತೆ ನಿಲ್ದಾಣದ ಆವರಣದಲ್ಲೂ ಶ್ವಾನದಳ ಮತ್ತು ವಿದ್ವಂಸಕ ಕೃತ್ಯ ನಿಗ್ರಹದಳದಿಂದ ಪರಿಶೀಲನೆ ನಡೆಸಲಾಯಿತು. ನಿಲ್ದಾಣದಲ್ಲಿದ್ದ ಜನರಿಗೂ ಅನುಮಾನಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಯಿತು.