ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು: ಮೀನಾ ನಾಗರಾಜ್

| Published : Mar 30 2024, 12:57 AM IST

ಸಾರಾಂಶ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ಎಸ್‌ಎಸ್‌ಟಿ, ಎಫ್ ಎಸ್ ಟಿ ತಂಡಗಳ ಚುರುಕಿನ ಕಾರ್ಯಾಚರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

- ಚುನಾವಣಾ ವೆಚ್ಚ ವೀಕ್ಷಕರ ಸಭೆ । ಜಿಲ್ಲೆಯಲ್ಲಿ 22 ಚೆಕ್‌ ಪೋಸ್ಟ್‌ ತೆರೆಯಲಾಗಿದೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ಎಸ್‌ಎಸ್‌ಟಿ, ಎಫ್ ಎಸ್ ಟಿ ತಂಡಗಳ ಚುರುಕಿನ ಕಾರ್ಯಾಚರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣಾ ವೆಚ್ಚ ವೀಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕಿಂತ ಮುಂಚೆಯಿಂದಲೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 22 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು ಬಸ್, ಲಾರಿ, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ಸಂಶಯಾಸ್ಪದ ಸಾಗಾಣೆಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆಂದು ತಿಳಿಸಿದರು.

ಚುನಾವಣಾ ಅವಧಿಯಲಿ ಎಲ್ಲಾ ಬ್ಯಾಂಕ್ ಗಳ ಮೂಲಕ ನಡೆಯಬಹುದಾದ ಅನುಮಾನಾಸ್ಪದ ವ್ಯವಹಾರಗಳು, ಹಣ ಪಡೆಯುವ ಹಾಗೂ ಠೇವಣಿ ಇಡುವವರ ಬಗ್ಗೆ ಬ್ಯಾಂಕುಗಳು ಪ್ರತಿನಿತ್ಯ ಮಾಹಿತಿ ಒದಗಿಸಬೇಕು, ಈವರೆಗೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಾಗೂ ವಶಪಡಿಸಿಕೊಂಡ ಸಾಮಾಗ್ರಿಗಳ ಬಗ್ಗೆ ತಿಳಿಸಿದರು.

ಚುನಾವಣಾ ವೆಚ್ಚವೀಕ್ಷಕರದ ಅಲೋಕ್ ಕುಮಾರ್ ಜಿಲ್ಲೆಯ ಮಾಹಿತಿ ಪಡೆದು ಮಾತನಾಡಿ, ಈವರೆಗೆ ಚುನಾವಣೆ ವೆಚ್ಚ ಹಾಗೂ ಶಾಂತಿ ಸುವ್ಯವಸ್ಥೆ ಮತ್ತು ಶಿಸ್ತು ಕ್ರಮದ ಕುರಿತು ಜಿಲ್ಲಾಡಳಿತದಿಂದ ಉತ್ತಮ ಕಾರ್ಯಗಳಾಗಿವೆ. ಚುನಾವಣೆ ಮುಕ್ತಾಯದವರೆಗೂ ಶಿಸ್ತು ಬದ್ದ ಕಾರ್ಯನಿರ್ವಹಣೆ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು. ಅಲ್ಲದೆ ವೆಚ್ಚದ ವಿವರ ವನ್ನು ನಮೂನೆಯಲ್ಲಿ ತುಂಬಿ ನಿಗದಿತ ಅವಧಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.

ಸಭೆಯ ನಂತರ ವೆಚ್ಚ ವೀಕ್ಷಕರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾದ ಚುನಾವಣೆಗೆ ಸಂಬಂಧಿಸಿದ ಸಹಾಯ ವಾಣಿ ಕೇಂದ್ರ, ನಿಯಂತ್ರಣ ಕೊಠಡಿ, ಮಾಧ್ಯಮ ಕಣ್ಗಾವಲು ಕೋಶಕ್ಕೆ ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪ ವಿಭಾಗಧಿಕಾರಿ ದಲ್ಜಿತ್ ಕುಮಾರ್, ಜಿಲ್ಲಾ ಖಜಾನಾಧಿಕಾರಿ ಓಂಕಾರಪ್ಪ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.----- ಬಾಕ್ಸ್‌ -----ಲೋಕಸಭಾ ಸಾರ್ವತ್ರಿಕ ಚುನಾವಣೆ: ವೆಚ್ಚ ವೀಕ್ಷಕರ ನೇಮಕ ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ಅಲೋಕ್ ಕುಮಾರ್ ಅವರನ್ನು ಕೇಂದ್ರ ಚುನಾವಣಾ ಆಯೋಗ ನೇಮಕ ಮಾಡಿದೆ. ಚುನಾವಣಾ ವೆಚ್ಚ ವೀಕ್ಷಕರ ಕಚೇರಿಯನ್ನು ನಗರದ ಪ್ರವಾಸಿ ಮಂದಿರದ ಮೊದಲನೆ ಮಹಡಿ ಕೊಠಡಿ ಸಂಖ್ಯೆ 204 ರಲ್ಲಿ ತೆರೆಯಲಾಗಿದ್ದು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಮೊಬೈಲ್ ಸಂಖ್ಯೆ 9482258424 ಗೆ ಅಥವಾ ಇ ಮೈಲ್ ವಿಳಾಸ eompudupi2024@gmail.com ಗೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 29 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ವೆಚ್ಚ ವೀಕ್ಷಕರ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಚುನಾವಣಾ ವೆಚ್ಚ ವೀಕ್ಷಕ ಅಲೋಕ್ ಕುಮಾರ್, ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.