ಹುಬ್ಬಳ್ಳಿ:
ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್ ಹೆಸರಲ್ಲಿ ನಗರದಲ್ಲಿ ಮಾದರಿಯ ಸಮುದಾಯ ಭವನ ನಿರ್ಮಿಸಿರುವುದು ಅಭಿನಂದನಾರ್ಹ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಇಲ್ಲಿನ ನ್ಯೂ ಇಂಗ್ಲಿಷ್ ಸ್ಕೂಲ್ ಹತ್ತಿರದ ಪಡದಯ್ಯನ ಹಕ್ಕಲದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನರಾಂ ಈ ಇಬ್ಬರೂ ದೊಡ್ಡ ಶಕ್ತಿಗಳು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಬಹುದಿನಗಳ ಒತ್ತಾಯ, ಶ್ರಮದ ಫಲವಾಗಿ ಈ ಕನಸು ಈಡೇರಿದೆ. ಇದರ ಭೂಮಿಪೂಜೆ ಮಾಡುವ ವೇಳೆ ಹಲವು ತೊಡಕುಗಳು ಉಂಟಾಗಿದ್ದವು. ಅವುಗಳನ್ನೆಲ್ಲ ಸರಿಪಡಿಸಿ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ನಿರ್ಮಾಣಕ್ಕಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ 10 ಬಾರಿ ಓಡಾಡಿದರೂ ಅನುದಾನ ಕೊಡಲಿಲ್ಲ. ಇದನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಬೇಕಾಯಿತು ಎಂದರು.ಡಾ. ಬಾಬು ಜಗಜೀವನರಾಮ್ ಅವರು ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಮಹಾನ್ ನಾಯಕರಾಗಿದ್ದಾರೆ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಇಬ್ಬರೂ ಜಾತಿ ಮೀರಿ ಬೆಳೆದ ವ್ಯಕ್ತಿತ್ವಗಳಾಗಿದ್ದಾರೆ. ಇಂದು ಸಮಾಜ ಒಡೆಯುವ ಕೆಲಸಗಳಾಗುತ್ತಿವೆ. ಈ ಕುರಿತು ಸಮಾಜ ಬಾಂಧವರು ಜಾಗೃತರಾಗಬೇಕಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಪಾಲಿಕೆ ಸದಸ್ಯರಾದ ನಜೀರ್ ಹೊನ್ಯಾಳ, ಶ್ರೀನಿವಾಸ ಬೆಳದಡ್ಡಿ, ಇಮ್ರಾನ್ ಯಲಿಗಾರ, ಪಾಲಿಕೆ ಮಾಜಿ ಸದಸ್ಯ ಗಣೇಶ ಟಗರಗುಂಟಿ, ಮೋಹನ ಹಿರೇಮನಿ, ಜಿಪಂ ಸಿಇಒ ಭುವನೇಶ ಪಾಟೀಲ, ಎಸಿ ಶಾಲಂ ಹುಸೇನ್, ಶಹರ ತಹಸೀಲ್ದಾರ್ ಮಹೇಶ ಗಸ್ತೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಸೇರಿ ಹಲವರಿದ್ದರು.
ಬ್ಯಾನರ್ ಬದಲು
ಕಾರ್ಯಕ್ರಮದ ಪೂರ್ವದಲ್ಲಿ ವೇದಿಕೆ ಮೇಲೆ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯದ್ದಾಗಲಿ ಹೆಸರು ಬಳಸದೇ ಕೇವಲ ಕಾಂಗ್ರೆಸ್ ನಾಯಕರ ಫೋಟೋ ಬಳಸಿ ಬ್ಯಾನರ್ ಅಳವಡಿಸಲಾಗಿತ್ತು. ಜತೆಗೆ ಸಮುದಾಯ ಭವನದಲ್ಲಿ ಸಚಿವ ಸಂತೋಷ ಲಾಡ್ ಅವರ ಆಳೆತ್ತರದ ಬ್ಯಾನರ್ ಅಳವಡಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಗೂ ಪೂರ್ವದಲ್ಲಿ ವೇದಿಕೆ ಕಡೆಗೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ ಆಗಿರುವ ಅಚಾತುರ್ಯ ಅರಿತು ಕಾರ್ಯಕರ್ತರಿಗೆ ವೇದಿಕೆ ಬ್ಯಾನರ್ ಬದಲಿಸುವಂತೆ ಸೂಚಿಸಿದರು. ಜತೆಗೆ ಸಚಿವ ಸಂತೋಷ ಲಾಡ್ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಸಮುದಾಯ ಭವನದಲ್ಲಿದ್ದ ಅವರ ಬ್ಯಾನರ್‌ಗಳನ್ನೆಲ್ಲ ತೆರವುಗೊಳಿಸಿ ಸಭಾಪತಿ ಬಸವರಾಜ ಹೊರಟ್ಟಿ ಭಾವಚಿತ್ರದ ಬ್ಯಾನರ್ ಅಳವಡಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಮಾದಿಗ ಸಮುದಾಯದವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಲ್ಲ ಎಂದು ವ್ಯಕ್ತಿಯೋರ್ವರು ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರು. ಸ್ಥಳದಲ್ಲಿಯೇ ಇದ್ದ ಮುಖಂಡರು ಅವರನ್ನು ಸಮಾಧಾನ ಪಡಿಸಿ ಕಳಿಸಿದರು.