ಚನ್ನಗಿರಿ ತಾಲೂಕು ನೀತಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅತ್ಯಂತ ಪಾರದರ್ಶಕ, ಮಾದರಿ, ವಿಶಿಷ್ಟವಾಗಿ ನಡೆದಿದೆ. ಶ್ರೀ ವೀರಭದ್ರೇಶ್ವರ ಸ್ವಾಮಿ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಒಟ್ಟು 12 ಸ್ಥಾನಗಳಲ್ಲಿ 1 ಅವಿರೋಧ ಆಯ್ಕೆ ಸೇರಿದಂತೆ 8 ಸ್ಥಾನ ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ ಎಂದು ತಂಡದ ಎನ್.ಸಿ.ಶಶಿಧರ (ಬಾಬು) ತಿಳಿಸಿದ್ದಾರೆ.

- ಶ್ರೀ ವೀರಭದ್ರೇಶ್ವರ ಸನ್ನಿಧಿ, ಸ್ವಾಮೀಜಿ ಸಮಕ್ಷಮ ಅಭ್ಯರ್ಥಿಗಳ ಆಣೆ, ಪ್ರಮಾಣಕ್ಕೆ ಒಲಿದ ಮತದಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಚನ್ನಗಿರಿ ತಾಲೂಕು ನೀತಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಅತ್ಯಂತ ಪಾರದರ್ಶಕ, ಮಾದರಿ, ವಿಶಿಷ್ಟವಾಗಿ ನಡೆದಿದೆ. ಶ್ರೀ ವೀರಭದ್ರೇಶ್ವರ ಸ್ವಾಮಿ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಒಟ್ಟು 12 ಸ್ಥಾನಗಳಲ್ಲಿ 1 ಅವಿರೋಧ ಆಯ್ಕೆ ಸೇರಿದಂತೆ 8 ಸ್ಥಾನ ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ ಎಂದು ತಂಡದ ಎನ್.ಸಿ.ಶಶಿಧರ (ಬಾಬು) ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಚುನಾವಣೆಯಲ್ಲಿ ಯಾವುದೇ ಆಮಿಷ, ಹಣ ಹಂಚದೇ, ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ವಿಶಿಷ್ಟ ಚುನಾವಣೆಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ತಂಡವು ಸಂಘದ ನುಗ್ಗಿಹಳ್ಳಿ, ನೀತಿಗೆರೆ, ಹೊನ್ನೇಮರದಹಳ್ಳಿ, ಬೊಮ್ಮೇನಹಳ್ಳಿ ಗ್ರಾಮಗಳ ಎಲ್ಲ ಮತದಾರರ ವಿಶ್ವಾಸ ಗಳಿಸಿ, ಮಾದರಿ ಚುನಾವಣೆಗೆ ಕಾರಣವಾಗಿದೆ ಎಂದರು.

ಚುನಾವಣೆ ಘೋಷಣೆಗೆ ಮುನ್ನವೇ ಗ್ರಾಮದ ಹಿರಿಯರು, ಸಮಾನ ಮನಸ್ಕರು ಸೇರಿ ವೀರಭದ್ರೇಶ್ವರ ಸ್ವಾಮಿ ತಂಡವನ್ನು ರಚಿಸಿದ್ದೆವು. ಭ್ರಷ್ಟಾಚಾರರಹಿತ ಆಡಳಿತ ನೀಡುವ ಸಂಕಲ್ಪದೊಂದಿಗೆ ಸ್ಪರ್ಧಿಸಿದ್ದ ತಂಡದ ಅಭ್ಯರ್ಥಿಗಳು ನಾವು ಮತದಾರರಿಗೆ ಆಸೆ, ಆಮಿಷವೊಡ್ಡುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆಂದು ದೇವಸ್ಥಾನದಲ್ಲಿ ಪ್ರಮಾಣದ ಪತ್ರ ಓದಿ, ಆಣೆ ಮಾಡಿದ್ದೆವು. ಈ ಆಣೆ, ಪ್ರಮಾಣದ ವೀಡಿಯೋ ಹಾಗೂ ಮುದ್ರಿತ ಪ್ರತಿಯನ್ನು ಸಂಘದ ವ್ಯಾಪ್ತಿಯ ಎಲ್ಲ 800 ಮತದಾರರರ ಮನೆ ಮನೆಗೂ ತಲುಪಿಸಿ, ಮತ ಕೇಳಿದ್ದೆವು ಎಂದರು.

ಸಹಕಾರ ಸಂಘಗಳ ಚುನಾವಣೆಗಳ ಬಗ್ಗೆ ಮತದಾರರಲ್ಲಿದ್ದ ನಿರಾಸಕ್ತಿ ದೂರಗೊಳಿಸಲು ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಸಭೆಗಳನ್ನು ಗ್ರಾಮಗಳಲ್ಲಿ ನಡೆಸಲಾಗಿತ್ತು. ಸ್ವಾಮೀಜಿ ಸಮ್ಮುಖ ಎಲ್ಲ ಅಭ್ಯರ್ಥಿಗಳೂ ಆಣೆ, ಪ್ರಮಾಣ ಮಾಡಿದ್ದರು. ಇದರಿಂದ ಪ್ರೇರಿತರಾದ ಮತದಾರರು ಸಹ ಸಂಘದ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ.80ರಷ್ಟು ಮತ ಚಲಾಯಿಸಿ ಹೊಸ ದಾಖಲೆ ಬರೆದರು ಎಂದು ತಿಳಿಸಿದರು.

ಸಂಘದ ಒಟ್ಟು 12 ಸ್ಥಾನಗಳ ಪೈಕಿ ಎಸ್‌ಟಿ ಮತ್ತು ಬಿಸಿಎಂ- ಎ ವರ್ಗ ಇಬ್ಬರು ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವೀರಭದ್ರೇಶ್ವರ ಸ್ವಾಮಿ ತಂಡದ 7 ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಒಟ್ಟಾರೆ 12 ಸ್ಥಾನಗಳ ಪೈಕಿ ರಘು ನೇತೃತ್ವದ ತಂಡವು 8 ಸ್ಥಾನ ಗೆದ್ದು, ಮಾದರಿ ಚುನಾವಣೆಗೆ ಸಾಕ್ಷಿಯಾಗಿದೆ. ಸಂಘದ ಷೇರುದಾರರನ್ನು ಹೆಚ್ಚಿಸುವುದು, ಸಕಾಲಕ್ಕೆ ಎಲ್ಲರಿಗೂ ಸಾಲ ಸಿಗಬೇಕು, ಸಂಘದಲ್ಲಿ ನಯಾಪೈಸೆ ದುರ್ಬಳಕೆ ಆಗಬಾರದು, ರೈತರಿಗೆ ಸಕಾಲಕ್ಕೆ ಗೊಬ್ಬರ ಸಿಗಬೇಕೆಂಬುದು ನಮ್ಮ ಗುರಿ ಎಂದು ಶಶಿಧರ ಹೇಳಿದರು.

ಸಂಘದ ಚುನಾಯಿತ ಸದಸ್ಯರಾದ ಎಂ.ಪಿ. ಕುಮಾರಸ್ವಾಮಿ, ಬಿ.ಸಿ. ಮಹಾರುದ್ರಪ್ಪ, ಎಸ್.ಸಿ. ಮಹಾರುದ್ರಪ್ಪ, ಎನ್.ಸಿ. ಶಶಿಧರ, ಎನ್.ಸಿ.ಸುರೇಶ, ಎ.ಎಸ್.ಮಾದಮ್ಮ, ಎಚ್.ಎಂ.ರೂಪಾ, ಎಂ.ವಿ. ರಮೇಶ, ರಮೇಶ ನಾಯ್ಕ, ನಾಗರಾಜಪ್ಪ, ಚಂದ್ರಪ್ಪ, ರಘು ಇತರರು ಇದ್ದರು.

- - -

-10ಕೆಡಿವಿಜಿ4: ದಾವಣಗೆರೆಯಲ್ಲಿ ಶನಿವಾರ ಚನ್ನಗಿರಿ ತಾ. ನೀತಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜಯ ಗಳಿಸಿದ ತಂಡದ ಎನ್.ಸಿ. ಶಶಿಧರ (ಬಾಬು) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.