ಆಧುನಿಕ ಭಗೀರಥ ಎಂ.ಸಿ.ಮನಗೂಳಿ ಸದಾ ಚಿರಸ್ಮರಣೀಯ

| Published : Jan 28 2024, 01:16 AM IST

ಸಾರಾಂಶ

ಎರಡು ಬಾರಿ ಸಚಿವರಾಗಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದ ನಾಯಕ ಡಿ.ಎಂ.ಸಿ.ಮನಗೂಳಿ ಅವರಿಗೆ ಇಂದು ಮೂರನೇ ಪುಣ್ಯಸ್ಮರಣೆ

ಸಿದ್ದಲಿಂಗ ಕಿಣಗಿ

ಕನ್ನಡಪ್ರಭ ವಾರ್ತೆ ಸಿಂದಗಿ

ಶಕ್ತಿ ಇದ್ದಾಗ ದುಡಿಯಬೇಕು, ರೊಕ್ಕಇದ್ದಾಗ ದಾನ-ಧರ್ಮ ಮಾಡಬೇಕು. ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಎಂದು ಆಗಾಗ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದ ಮಾಜಿ ಸಚಿವ ಆಧುನಿಕ ಭಗೀರಥ, ಸರಳ ಸಜ್ಜನಿಕೆಯ ರಾಜಕಾರಣಿ ದಿ.ಎಂ.ಸಿ.ಮನಗೂಳಿ ಅವರು ನಮ್ಮನ್ನಗಲಿ ಇಂದಿಗೆ ಮೂರುವರ್ಷವಾಯಿತು. ಅವರು ಮಾಡಿದ ಸೇವೆ, ಕೆಲಸ, ಕಾರ್ಯಗಳು ಜನಮಾನಸದಲ್ಲಿವೆ. ಆದರ್ಶವಾಗಿ ಬಾಳಿ ಬದುಕಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಅವರು.

ಮನಗೂಳಿಯವರು ಗ್ರಾಮ ಸೇವಕನಿಂದ ಗ್ರಾಮೀಣಾಭಿವೃದ್ಧಿ ಸಚಿವರಾದದ್ದು ಸಾಮಾನ್ಯ ಸಾಧನೆಯೇನಲ್ಲ. ಪಾದರಸದಂತೆ ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಅವರದು ಮೃದುಮಾತು. ತೀಕ್ಷ್ಣಮತಿ, ತ್ವರಿತ ನಿರ್ಧಾರಗಳೇ ಅವರ ಯಶಸ್ಸಿನ ಗುಟ್ಟು. ಮನಗೂಳಿಯವರು ಸಮಾಜ ಸೇವಕರಾಗಿ, ಶಿಕ್ಷಣ ಪ್ರೇಮಿಯಾಗಿ, ಸಹಕಾರಿ ಧುರೀಣರಾಗಿ, ಕ್ರಿಯಾಶೀಲ, ರಾಜಕಾರಣಿಯಾಗಿ ಮಾಡಿದ ಅನುಪಮ ಸೇವೆ ಮತ್ತುಅವರ ಬಹುಮುಖ ವ್ಯಕ್ತಿತ್ವ ಯುವಜನಾಂಗಕ್ಕೆ ಪ್ರೇರಕವಾಗಿದ್ದರು. ಮನಗೂಳಿಯವರ ಸಾಧನೆಯ ಹಿಂದಿನ ಶಕ್ತಿ ಅವರಧರ್ಮ ಪತ್ನಿ ಸಿದ್ದಮ್ಮಗೌಡ್ತಿ

ಎಂದರೆ ತಪ್ಪಾಗಲಾರದು.

ಪಿಎಲ್‌ಡಿ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿ ಅದರ ಅಧ್ಯಕ್ಷರಾಗುವ ಮೂಲಕ ಮನಗೂಳಿಯವರ ರಾಜಕೀಯ ಹೆಜ್ಜೆ ಆರಂಭವಾಯಿತು. ಮಹತ್ವಕಾಂಕ್ಷಿಯಾಗಿದ್ದ ಅವರ ಚಿತ್ತ ವಿಧಾನಸೌಧದತ್ತ ಇತ್ತು. ಅವರು ತಮ್ಮ ಆ ಕನಸನ್ನು ನಿರಂತರ ಪ್ರಯತ್ನ ಮತ್ತು ಪರಿಶ್ರಮದ ಮೂಲಕ ನನಸಾಗಿಸಿಕೊಂಡರು.1989ರಲ್ಲಿ ವಿಧಾನಸಭೆ ಚುನಾವಣೆಗೆ ಜನತಾದಳದಿಂದ ಸ್ಪರ್ಧಿಸಿ ಸೋತರು. 1994ರಲ್ಲಿ ಪುನಃ ಸ್ಪರ್ಧಿಸಿ ಗೆದ್ದರು. ಶಾಸಕರಾಗಿ ಸಿಂದಗಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿ ಕೆರೆ ನಿರ್ಮಾಣ ಹಾಗೂ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳ ಅನುಷ್ಠಾನಗೊಳ್ಳುವವರೆಗೆ ಬರಿಗಾಲಿನಿಂದ ನಡೆದು ಬರದ ನಾಡಿಗೆ ನೀರು ಹರಿಸಲು ಕಾರಣರಾದರು.

2018ರಲ್ಲಿ ಜೆ.ಡಿ.ಎಸ್‌ನಿಂದ ಸ್ಪರ್ಧಿಸಿ ಮತ್ತೊಮ್ಮೆ ಶಾಸಕರಾದರು. ಶಾಸಕರಾದ ಮನಗೂಳಿಯವರು ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ತೋಟಗಾರಿಕೆ ಸಚಿವರಾದರು. ಹಾಗೆಯೇ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವರಾದರು. ಸಚಿವರಾಗಿ ಆಲಮೇಲನ್ನುತಾಲೂಕು ಕೇಂದ್ರವಾಗಿಸಿದರು. ಆಲಮೇಲಕ್ಕೆ ತೋಟಗಾರಿಕಾ ಕಾಲೇಜನ್ನು ಮಂಜೂರು ಮಾಡಿಸಿದರು. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಲು ₹17 ಕೋಟಿ ಮಂಜೂರಾತಿ ತಂದರು. ಸಿಂದಗಿ ಪಟ್ಟಣದ ಒಳಚರಂಡಿ ಕಾಮಗಾರಿಗಾಗಿ ₹90 ಕೋಟಿ ಹಣ ಬಿಡುಗಡೆಗೊಳಿಸಿದರು. ಮಿನಿ ವಿಧಾನಸೌಧಕ್ಕೆ ₹9.75 ಕೋಟಿ ಹಣ ಬಿಡುಗಡೆ ಮಾಡಿಸಿದರು.

ಜಾತ್ಯತೀತ ಮನೋಭಾವ ಹೊಂದಿದ ಮನಗೂಳಿಯವರು ಜಾತಿಗಿಂತ ನೀತಿ ಮುಖ್ಯ ಎನ್ನುತ್ತಿದ್ದರು. ಸರ್ವಧರ್ಮದವರೊಂದಿಗೆ ಸೌಹಾರ್ದ ಮನೋಭಾವನೆ ಹೊಂದಿದ್ದರು.

ಮನಗೂಳಿಯವರದು ಆಕರ್ಷಕ ವ್ಯಕ್ತಿತ್ವ.ಹಸನ್ಮುಖಿ ಸದಾ ಸುಖಿ ಎಂಬಂತೆ ಅವರು ನಗುನಗುತ್ತಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಗ್ರಾಮೀಣ ಸೊಗಡು ದೇಸಿಯ ಸಂಸ್ಕೃತಿ ಪ್ರತೀಕ ಅವರ ವ್ಯಕ್ತಿತ್ವ. ಧಣಿಯವರಿಯದ ದುಡಿಮೆಗಾರ, ಜನಪರ ಕಾಳಜಿಯ ನಾಯಕ, ಛಲದಂಕ ಮಲ್ಲ, ರೈತ ಮಿತ್ರ. ಹುಟ್ಟು ಹೋರಾಟಗಾರ ದಿ.ಎಂ.ಸಿ. ಮನಗೂಳಿಯವರು ಇಂದಿಗೆ ನಮ್ಮನ್ನಗಲಿ ಮೂರುವರ್ಷವಾಯಿತು. ಇಂದುಅವರ ಮೂರನೇ ಪುಣ್ಯಸ್ಮರಣೆಯನ್ನುಆಚರಿಸುತ್ತಿದ್ದೇವೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲ ಸಿಂದಗಿ ಮತಕ್ಷೇತ್ರಕ್ಕೆ ಅವರು ಮಾಡಿದ ಜನಪರ ಸೇವಾಕಾರ್ಯಗಳ ಮೂಲಕ ಜನಮಾನಸದಲ್ಲಿಅವರ ನೆನಪು ಸದಾ ಹಚ್ಚಹಸಿರಾಗಿದೆ.

----------

ಕೋಟ್‌...

ದಿ. ಎಂ.ಸಿ.ಮನಗೂಳಿ ಅವರು ಒಬ್ಬ ಸರಳ ಸಾಮಾನ್ಯ ಶಾಸಕರಾಗಿ, ಸಚಿವರಾಗಿ ಅನೇಕ ಯುವ ರಾಜಕಾರಣಿಗಳಿಗೆ ಮಾದರಿಯಾಗಿ ಅಜಾತಶತ್ರು ಆದವರು. ಅವರ ಬದುಕೇ ಒಂದು ಇತಿಹಾಸ. ಅಭಿವೃದ್ಧಿ ಎಂದರೆ ಮನಗೂಳಿ, ಮನಗೂಳಿ ಎಂದರೆ ಅಭಿವೃದ್ಧಿಯೆಂಬ ಮಾತು ಇಡೀ ಜಿಲ್ಲೆಯ ತುಂಬಾ ಮಾತನಾಡುವಂತೆ ಕೆಲಸ ಮಾಡಿ ಹೋಗಿದ್ದಾರೆ. ಅವರು ಎಂದೆಂದಿಗೂ ಚಿರಸ್ಮರಣೀಯರು. ಅಜರಾಮರರು.

- ಅರವಿಂದ ಹಂಗರಗಿ, ಕಾಂಗ್ರೆಸ್ ಮುಖಂಡರು, ಸಿಂದಗಿ.