ಸಾರಾಂಶ
ಕೀಟ ನಾಶಕ, ಕಳೆ ನಾಶಕಗಳ ಬಳಕೆಯಿಂದ ಜೇನು ನೊಣಗಳ ನಾಶ । ಜೇನು ಬಿಕರಿಗೆ ಸಹಕರಿಸುತ್ತಿದ್ದ ಜೇನು ಮಾರುಕಟ್ಟೆ ಸಹಕಾರ ಸಂಘ ಶ್ರೀವಿದ್ಯಾ ಸಕಲೇಶಪುರ
ಕನ್ನಡಪ್ರಭ ವಾರ್ತೆ ಸಕಲೇಶಪುರಮಲೆನಾಡಿನಲ್ಲಿ ಜೇನು ಕೃಷಿ ಅವನತಿಗೆ ಬದಲಾದ ಕೃಷಿ ಪದ್ದತಿ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ೧೯೩೦-೪೦ರ ದಶಕದಲ್ಲಿ ಕೊಡಗು,ಚಿಕ್ಕಮಗಳೂರು ಹಾಗು ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದ್ದ ಜೇನಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ೧೯೪೦ ರಲ್ಲಿ ಮೂರು ಜಿಲ್ಲೆಗಳನ್ನು ಒಳಗೊಂಡಂತೆ ಪಟ್ಟಣದಲ್ಲಿ ಜೇನು ಮಾರುಕಟ್ಟೆ ಸಹಕಾರ ಸಂಘ ಸ್ಥಾಪನೆಯಾಗಿತ್ತು. ಆದರೆ ಸಂಘಕ್ಕೆ ಸ್ಥಳೀಯವಾಗಿಯೇ ಜೇನು ದೊರಕದಾಗಿದೆ.
ಜೇನು ಕೃಷಿ ಅಭಿವೃದ್ಧಿಗೆ ಅಗತ್ಯವಿದ್ದ ತರಬೇತಿ, ಪ್ರಾತ್ಯಕ್ಷಿಕೆ, ಸಾಲಸೌಲಭ್ಯ, ಜೇನುಪೆಟ್ಟಿಗೆ ಒದಗಿಸುವ ಕೆಲಸ ಮಾಡುತ್ತಿದ್ದರು. ಪರಿಣಾಮ ಕರ್ನಾಟಕದಲ್ಲಿ ಮಲೆನಾಡು ಜೇನಿನ ತವರು ಎಂದೆ ಕರೆಸಿಕೊಳ್ಳುತ್ತಿತ್ತು. ಈ ಮಾತು ೧೯೯೦ ರ ದಶಕದವರಗೂ ಮುಂದುವರೆದಿತ್ತು. ಆದರೆ, ನಂತರದ ವರ್ಷಗಳಲ್ಲಿ ಜೇನು ಕೃಷಿಗೆ ಎಷ್ಟೇ ಉತ್ತೇಜನ ನೀಡಿದರೂ ಸ್ಥಳೀಯವಾಗಿ ಜೇನು ಉತ್ಪಾದನೆಯಾಗದಾಗಿದೆ. ಪರಿಣಾಮ ಮಾರುಕಟ್ಟೆಗೆ ಸ್ಥಳೀಯ ಜೇನು ಪೊರೈಕೆಯಾಗದಾಗಿದೆ. ಇದರಿಂದಾಗಿ ಉತ್ತರ ಭಾರತದಿಂದ ಜೇನು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಜೇನು ಮಾರಾಟ ಸಹಕಾರ ಸಂಘ ಮಾಡುತ್ತಿದೆ.ಜೇನು ಕೃಷಿ ಅವನತಿ:
೧೯೯೦ ರದಶಕದ ನಂತರ ಕಾಫಿ ಬೆಳೆ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ನಂತರ ಹಾಗೂ ೨೦೦೦-೦೧ ರ ವೇಳೆಗೆ ಕಾಳು ಮೆಣಸಿನ ಧಾರಣೆ ವಿಪರೀತ ಏರಿಕೆ ಕಂಡ ಪರಿಣಾಮ ಬಹುತೇಕ ಕಾಫಿ ಹಾಗೂ ಮೆಣಸಿನ ಬಳ್ಳಿ ಬೆಳೆಯುವ ವಿಧಾನ ಸಂಪ್ರದಾಯಕತೆಗೆ ಬದಲಾಗಿ ಆಧುನಿಕತೆ ಪಡೆದಿದ್ದು, ಹೆಚ್ಚೆಚ್ಚು ಫಸಲು ಉತ್ಪಾದನೆಯ ಸ್ಪರ್ಧೆಗೆ ಬಿದ್ದಿರುವ ಬೆಳೆಗಾರರು ವಾರ್ಷಿಕವಾಗಿ ಕಾಫಿಗೆ ಎರಡರಿಂದ ಮೂರು ಬಾರಿ ಹಾಗೂ ಮೆಣಸಿನ ಬಳ್ಳಿಗಳಿಗೆ ನಾಲ್ಕರಿಂದ ಐದು ಬಾರಿ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಇದು ಜೇನು ಹುಳುಗಳಿಗೆ ಕಂಟಕವಾಗಿ ಪರಿಣಮಿಸಿದೆ.ಅಂತಾರಾಜ್ಯದಿಂದ ಅಮದು:
ಮಲೆನಾಡಿನ ಜೇನು ಪರಿಶುದ್ದ ಎಂಬ ನಂಬಿಕೆ ರಾಜ್ಯದ ಜನರಲ್ಲಿರುವುದರಿಂದ ಸಾಕಷ್ಟು ಬೇಡಿಕೆ ಇದ್ದು ವಾರ್ಷಿಕ ಜೇನು ಸಹಕಾರ ಸಂಘ ಸುಮಾರು ಮೂರು ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿತ್ತು. ಆದರೆ, ಸ್ಥಳಿಯವಾಗಿ ಜೇನು ಉತ್ಪಾದನೆಯಾಗದ ಕಾರಣ ಈಗ ಬಿಹಾರ, ಜಾರ್ಖಂಡ್ ರಾಜ್ಯದ ವಿವಿಧೆಡೆಯಿಂದ ಜೇನು ತರಿಸಿ ಮಾರಾಟ ಮಾಡಲಾಗುತ್ತಿದೆ.ಉತ್ತರ ಬಾರತದಲ್ಲಿ ಉದ್ಯಮ:
ಉತ್ತರ ಬಾರತದಲ್ಲಿ ಜೇನು ಕೃಷಿ ಉದ್ಯಮದ ರೂಪ ಪಡೆದಿದ್ದು ವಾರ್ಷಿಕ ಮೂರರಿಂದ ನಾಲ್ಕು ಬಾರಿ ಜೇನು ಕೊಯ್ಲು ನಡೆಸುವ ಪ್ರತಿ ಕುಟುಂಬ ಕನಿಷ್ಠ ೧೦೦ ರಿಂದ ಸಾವಿರ ಜೇನು ಪೆಟ್ಟಿಗೆಗಳ ಮೂಲಕ ಜೇನು ಉತ್ಪಾದಿಸುತ್ತಿದ್ದಾರೆ. ಅಲ್ಲಿನ ಜೇನು ಕೃಷಿಕರು ಇಟಲಿಯಿಂದ ಅಮದು ಮಾಡಿಕೊಂಡಿರುವ ಮೇಲ್ಲಿಪ್ಯಾರ ಎಂಬ ಜೇನಿನ ಹುಳುಗಳಿಂದ ಜೇನು ಉತ್ಪಾದಿಸುತ್ತಿದ್ದಾರೆ.ಮಲೆನಾಡಿನಲ್ಲಿ ಕಂಡು ಬರುವ ಜೇನು ವಿಧ:
ಹೆಜ್ಜೇನು, ಕೋಲು ಜೇನು, ಹುತ್ತದ ಜೇನು, ತಡುವೆ ಜೇನು, ಮಿಷರಿ ಕುರುಡ ಜೇನುಗಳು ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು. ಮಿಷರಿಕುರುಡ ಜೇನನ್ನು ವಾರ್ಷಿಕವಾಗಿ ಒಮ್ಮೆ ಕೊಯ್ಲು ನಡೆಸಲಾಗುತ್ತಿದೆ. ಪ್ರತಿಕೆಜಿಗೆ ಮೂರರಿಂದ ನಾಲ್ಕು ಸಾವಿರವರಗೆ ಧಾರಣೆ ಇದೆ. ಆದರೆ, ಉಳಿದೆಲ್ಲ ಜೇನಿನ ಬೆಲೆ 200 ರಿಂದ 400 ರು. ಇದೆ.ಸರ್ಕಾರದ ಮಾನದಂಡ ಬದಲಾಗಬೇಕಿದೆ:
ಜೇನು ಕೃಷಿ ಉತ್ತೇಜನಕ್ಕೆ ರಾಜ್ಯ ಸರ್ಕಾರ ಮಧುವನ ಯೋಜನೆ ಮೂಲಕ ಜೇನು ಸಾಕಣೆ ಅಭಿವೃದ್ಧಿಗಾಗಿ ಐದನೂರು ಕೋಟಿ ರು. ಅನುದಾನ ಬಿಡುಗಡೆಮಾಡಿದ್ದು ಜೇನು ಕೃಷಿ ಅಭಿವೃದ್ದಿ ಹೊಣೆಯನ್ನು ಆಯಾ ತೋಟಗಾರಿಕೆ ಇಲಾಖೆಗಳಿಗೆ ವಹಿಸಲಾಗಿದೆ.ಜೇನು ಕೃಷಿ ಹೆಚ್ಚಿನ ಲಾಭದಾಯಕ ಉದ್ಯಮವಾಗಿದೆ. ಇದಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದಲ್ಲಿ ಸಕ್ಕರೆ ಬದಲಿಗೆ ಜೇನನ್ನು ಮನೆಯಲ್ಲಿ ಬಳಸುವಂತೆ ಮನವೊಲಿಸಬಹುದಾಗಿದೆ. ಸಂಘದ ಮೂಲಕ ಸ್ಥಳೀಯವಾಗಿ ಜೇನು ಉತ್ಪಾದನೆಗೆ ರಿಯಾಯಿತಿ ಮೂಲಕ ಹಲವು ಸೌಲಭ್ಯ ಕಲ್ಪಿಸುತ್ತಿದ್ದೆವೆ.
ಜೈಮಾರುತಿ ದೇವರಾಜ್. ಅಧ್ಯಕ್ಷ, ಜೇನು ಮಾರಾಟ ಸಹಕಾರ ಸಂಘ.ಇತ್ತೀಚಿನ ವರ್ಷಗಳಲ್ಲಿ ಜೇನು ಕೃಷಿ ಬಗ್ಗೆ ಆಸಕ್ತಿ ಹೆಚ್ಚುತಿರುವುದು ಉತ್ತಮ ಬೆಳವಣಿಗೆ ಸರ್ಕಾರ ಮಲೆನಾಡಿನಲ್ಲಿ ಜೇನು ಕೃಷಿ ಉತ್ತೇಜನಕ್ಕೆ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ.
ಸತೀಶ್. ಸಿಇಒ. ಜೇನು ಮಾರಾಟ ಸಹಕಾರ ಸಂಘ.