ಕಂಬಳಕ್ಕೆ ಆಧುನಿಕ ತಂತ್ರಜ್ಞಾನ: ಅದಾನಿ ಸಂಸ್ಥೆ 10 ಲಕ್ಷ ರು. ಅನುದಾನ

| Published : Feb 05 2024, 01:45 AM IST

ಕಂಬಳಕ್ಕೆ ಆಧುನಿಕ ತಂತ್ರಜ್ಞಾನ: ಅದಾನಿ ಸಂಸ್ಥೆ 10 ಲಕ್ಷ ರು. ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಪ್ರದೇಶದ ಇತಿಹಾಸ ಪ್ರಸಿದ್ಧ ಜನಪದ ಕ್ರೀಡೆ ಕಂಬಳಕ್ಕೆ ಅದಾನಿ ಸಂಸ್ಥೆಯು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಗೆ ೧೦ ಲಕ್ಷ ರು. ಅನುದಾನ ನೀಡಿದೆ.

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಪಾದೂರು ಗ್ರಾಮದ ಕರಾವಳಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದ ಇತಿಹಾಸ ಪ್ರಸಿದ್ಧ ಜನಪದ ಕ್ರೀಡೆ ಕಂಬಳಕ್ಕೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಗೆ ೧೦ ಲಕ್ಷ ರು. ಅನುದಾನ ನೀಡಿದೆ. ಈ ಅನುದಾನಡಿಯಲ್ಲಿ ಕೋಣಗಳ ಓಟದ ಪ್ರಾರಂಭಿಕ ಹಂತದಲ್ಲಿ ನೂತನ ತಂತ್ರಜ್ಞಾನದ ಸ್ವಯಂಚಾಲಿತ ಟೈಮ್ ಗೇಟ್ ಹಾಗೂ ಓಟದ ಸಮಾಪ್ತಿಯಲ್ಲಿ ಫೋಟೊ ಫಿನಿಶ್ ಫಲಿತಾಂಶ ವ್ಯವಸ್ಥೆಗಳನ್ನು ಶನಿವಾರ ನಡೆದ ಐಕಳ ಕಂಬಳದಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಅಳವಡಿಕೆ ಯಶಸ್ವಿಯಾಗಿದೆ. ಈ ಹೈಟೆಕ್ ಸ್ವಯಂಚಾಲಿತ ಟೈಮ್ ಗೇಟನ್ನು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿದರು. ಫೋಟೊ ಫಿನಿಶ್ ಫಲಿತಾಂಶದ ವ್ಯವಸ್ಥೆಯನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಗಮದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಕಿಶೋರ್ ಅಳ್ವಾ, ಇತಿಹಾಸ ಪ್ರಸಿದ್ಧ ಕಂಬಳ ಕ್ರೀಡೆಯು ಅಂತರಾಷ್ರೀಯ ಮಟ್ಟದಲ್ಲೂ ಯಶಸ್ವಿಯಾಗಬೇಕೆಂದು ಆಪೇಕ್ಷಿಸುತ್ತಾ, ಮೊದಲ ಬಾರಿಗೆ ಅಳವಡಿಸಲಾಗಿರುವ ಈ ತಂತ್ರಜ್ಞಾನವನ್ನು ಮುಂಬರುವ ದಿನಗಳಲ್ಲಿ ಇನ್ನಷ್ಟು ಉನ್ನತ ದರ್ಜೆಗೆ ನವೀಕರಿಸಬೇಕು ಎಂದರು. ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಕಂಬಳ ಕ್ರೀಡಿಗೆ ಮತ್ತಷ್ಟು ಮೆರುಗು ದೊರೆದಂತಾಗಿದೆ ಎಂದರು. ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಕಂಬಳ ಕ್ರೀಡೆಯು ಅದಾನಿ ಸಮೂಹದ ಸಂಯೋಗದೊಂದಿಗೆ ವಿನೂತನ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ದೇಶ-ವಿದೇಶದಲ್ಲೂ ಕಂಬಳ ತನ್ನ ಛಾಪನ್ನು ಮೂಡಿಸುವಂತಾಗಬೇಕು ಎಂದು ತಿಳಿಸಿದರು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ, ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವರಿಗೆ ಅಭಿನಂದನೆ ಸಲ್ಲಿಸಿದರು.